ಇಂದು ಸಮನ್ವಯ ಸಮಿತಿ ಸಭೆ
Team Udayavani, Mar 4, 2019, 12:30 AM IST
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಸೋಮವಾರ ಬೆಳಗ್ಗೆ ನಡೆಯಲಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ, ಜಂಟಿ ಪ್ರಣಾಳಿಕೆ ರಚನೆ, ಸೀಟು ಹಂಚಿಕೆ ಕುರಿತು ಚರ್ಚಿಸುವ ಸಾಧ್ಯತೆಯಿದೆ.ಕುಮಾರಕೃಪ ಅತಿಥಿಗೃಹದಲ್ಲಿ ಬೆಳಗ್ಗೆ 9.30 ಕ್ಕೆ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಪಾಲ್ಗೊಳ್ಳಲಿದ್ದಾರೆ.
ಲೋಕಸಭೆ ಚುನಾವಣೆಗೆ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಲು ತೀರ್ಮಾನಿಸಿರುವುದರಿಂದ ಸೀಟು ಹಂಚಿಕೆಯಲ್ಲಿ ಬಿಕ್ಕಟ್ಟುತಲೆದೋರಿದೆ. ಈಗಾಗಲೇ ಎರಡೂ ಪಕ್ಷಗಳ ನಾಯಕರು ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ಸಮನ್ವಯ ಸಮಿತಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಘೋಷಿಸಿದ್ದರು. ಹೀಗಾಗಿ, ಸಭೆ ಮಹತ್ವ ಪಡೆದುಕೊಂಡಿದೆ.