ಮುಂಬೈಗೆ ತೆರಳಿದ್ದ ಡಿಕೆಶಿ ಬರಿಗೈಲಿ ವಾಪಸ್‌

Team Udayavani, Jul 11, 2019, 3:05 AM IST

ಬೆಂಗಳೂರು: ಮುಂಬೈನ ಹೋಟೆಲ್‌ನಲ್ಲಿದ್ದ ಅತೃಪ್ತ ಶಾಸಕರ ಮನವೊಲಿಸಲು ಹೋಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಹೋಟೆಲ್‌ ಮುಂಭಾಗ ಮಳೆಯನ್ನೂ ಲೆಕ್ಕಿಸದೆ ಆರು ತಾಸು ಕುಳಿತು ಪೊಲೀಸ್‌ ವಶಕ್ಕೆ ಒಳಗಾಗಿ, ಹೋದ ದಾರಿಗೆ ಸುಂಕ ಇಲ್ಲದಂತೆ ವಾಪಸ್ಸಾದರು.

ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ ಅವರ ಜತೆಗೂಡಿ ಬುಧವಾರ ಬೆಳಗ್ಗೆ 6 ಗಂಟೆಗೆ ಮುಂಬೈನ ರೆನಿಸನ್ಸ್‌ ಹೋಟೆಲ್‌ ತಲುಪಿದರು. ಹೋಗುವ ಮುನ್ನ ಆನ್‌ಲೈನ್‌ನಲ್ಲಿ ಕೊಠಡಿ ಸಹ ಕಾಯ್ದಿರಿಸಿದ್ದರು.

ಆದರೆ, ಡಿ.ಕೆ.ಶಿವಕುಮಾರ್‌ ಆಗಮನದ ವಿಚಾರ ತಿಳಿದ ಅತೃಪ್ತ ಶಾಸಕರು, ಮುಂಬೈ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ತಮಗೆ ಭದ್ರತೆ ಒದಗಿಸುವಂತೆ ಕೋರಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ಅವರು ಹೋಟೆಲ್‌ನತ್ತ ಬರುತ್ತಿದ್ದು, ನಮಗೆ ಬೆದರಿಕೆಯ ಆತಂಕವಿದೆ ಎಂದು ಪತ್ರ ಬರೆದಿದ್ದರು.

ಬೆಳಗ್ಗೆ 6 ಗಂಟೆ ವೇಳೆಗೆ ಡಿ.ಕೆ.ಶಿವಕುಮಾರ್‌ ಅವರ ತಂಡ ಹೋಟೆಲ್‌ನತ್ತ ಬರುತ್ತಿದ್ದಂತೆ ಪೊಲೀಸರು ಸುತ್ತುವರಿದು ಒಳಗೆ ಹೋಗಲು ಬಿಡಲಿಲ್ಲ. ನಾನು ಹೋಟೆಲ್‌ನಲ್ಲಿ ಕೊಠಡಿ ಮುಂಗಡ ಕಾಯ್ದಿರಿಸಿದ್ದೇನೆ. ಹೀಗಾಗಿ, ನನ್ನನ್ನು ಒಳಗೆ ಬಿಡಿ ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.

ಇದರ ನಡುವೆ, ಡಿ.ಕೆ.ಶಿವಕುಮಾರ್‌ ಅವರು ಕಾಯ್ದಿರಿಸಿದ್ದ ಕೊಠಡಿಯನ್ನು ಹೋಟೆಲ್‌ನ ಸಿಬ್ಬಂದಿ ರದ್ದುಗೊಳಿಸಿದರು. ಇದಕ್ಕೆ ಟ್ವೀಟ್‌ ಮೂಲಕ ಟಾಂಗ್‌ ನೀಡಿದ ಡಿ.ಕೆ.ಶಿವಕುಮಾರ್‌, “ನನ್ನಂತ ಕಸ್ಟಮರ್‌ ನಿಮಗೆ ಸಿಗಲ್ಲಾ, ನಾನು ಬೇಡವೇ’ ಎಂದು ಪ್ರಶ್ನಿಸಿದರು. “ನಾನು ನನ್ನ ಶಾಸಕರನ್ನು ಭೇಟಿ ಮಾಡಿಯೇ ಹೋಗುತ್ತೇನೆ’ ಎಂದು ಅಲ್ಲಿಯೇ ಕುಳಿತರು. ಮಳೆ ಬಂದರೂ ಕೊಡೆ ಹಿಡಿದೇ ಕುಳಿತರು. ಸ್ನಾನ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಅಲ್ಲೇ ತಿಂಡಿ-ಕಾಫಿ ಸೇವಿಸಿದರು.

ಈ ನಡುವೆ ಬಿಜೆಪಿ ಕಾರ್ಯಕರ್ತರ ದಂಡು ಹೋಟೆಲ್‌ಗೆ ಬಂದು, “ಗೋ ಬ್ಯಾಕ್‌ ಶಿವಕುಮಾರ್‌’ ಎಂದು ಘೋಷಣೆ ಹಾಕಿತು. ಈ ಮಧ್ಯೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಹ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ, ಶಾಸಕರ ಭೇಟಿಗೆ ಅವಕಾಶ ಸಿಕ್ಕರೆ ನಾನೂ ಮೊಬೈಲ್‌ ಮೂಲಕ ಮಾತನಾಡುತ್ತೇನೆ ಎಂದು ತಿಳಿಸಿದರು.

ಇಷ್ಟೆಲ್ಲಾ ನಡೆಯುತ್ತಿದ್ದಾಗ ಹೋಟೆಲ್‌ನಲ್ಲಿದ್ದ ಎಸ್‌.ಟಿ.ಸೋಮಶೇಖರ್‌ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಡಿ.ಕೆ.ಶಿವಕುಮಾರ್‌ ನನಗೆ ರಾಜಕೀಯ ಗುರುಗಳು. ನಾನು ಈ ಮಟ್ಟಕ್ಕೆ ಬರಲು ಅವರು ಕಾರಣ. ಅವರಿಗೆ ಅವಮಾನ ಆಗಬಾರದು. ದಯವಿಟ್ಟು ನಾವು ಅವರ ಜತೆ ಮಾತನಾಡಲು ಬಯಸುವುದಿಲ್ಲ. ವಿಶ್ವಾಸ ಬೇರೆ, ರಾಜಕಾರಣ ಬೇರೆ. ಈ ಸಂದರ್ಭದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಬೆಂಗಳೂರಿಗೆ ನಾವು ಬಂದಾಗ ಖುದ್ದಾಗಿ ಮಾತನಾಡುತ್ತೇವೆ’ ಎಂದು ಹೇಳಿದರು.

ಮಧ್ಯಾಹ್ನದ ವೇಳೆಗೆ ಹೋಟೆಲ್‌ ಸಿಬ್ಬಂದಿ ಸಹ ನಗರ ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿ, ಹೋಟೆಲ್‌ ಮುಂದೆ ಕಾಂಗ್ರೆಸ್‌ ನಾಯರು ಧರಣಿ ಕುಳಿತಿರುವುದರಿಂದ ಇತರ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಅಂತಿಮವಾಗಿ ಪೊಲೀಸರು ಡಿ.ಕೆ.ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ನಂತರ ವಿಶ್ವವಿದ್ಯಾಲಯದ ವಿಶ್ರಾಂತಿ ಗೃಹದಲ್ಲಿರಿಸಿ ನಂತರ ಕಳುಹಿಸಿಕೊಟ್ಟರು. ಅಲ್ಲಿಂದ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿಗೆ ವಾಪಸ್ಸಾದರು. ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಚಿವ ಜಿ.ಟಿ.ದೇವೇಗೌಡ, ಶಾಸಕ ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಪೊಲೀಸರು ಕರೆದೊಯ್ದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ