ಡಾಲ್ಬಿ ಸೌಂಡ್ಬಾಕ್ಸ್ ಮೇಲಿಂದ ಬಿದ್ದು ಸಾವು
Team Udayavani, Sep 14, 2019, 3:00 AM IST
ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಾಲ್ಬಿ ಸೌಂಡ್ ಬಾಕ್ಸ್ ಮೇಲೆ ನಿಂತುಕೊಂಡಿದ್ದ ಯುವಕ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಹುತಾತ್ಮ ಚೌಕ್ ಬಳಿ ಸಂಭವಿಸಿದೆ. ನಗರದ ಕಾಮತಗಲ್ಲಿ ನಿವಾಸಿ ರಾಹುಲ್ ಸದಾವರ (38) ಮೃತ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಸೌಂಡ್ ಬಾಕ್ಸ್ಗಳ ಮೇಲೆ ನಿಂತುಕೊಂಡಿದ್ದ.
ಕಾಮತಗಲ್ಲಿ ಗಣೇಶ ಮಂಡಳಿಯವರು ಗುರುವಾರ ರಾತ್ರಿಯಿಡೀ ಡಾಲ್ಬಿ ಸೌಂಡ್ ಬಾಕ್ಸ್ ಹಚ್ಚಿ ಸಂಭ್ರಮದಿಂದ ಮೆರವಣಿಗೆ ಮಾಡಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಡಾಲ್ಬಿ ಮೇಲಿಂದ ಬಿದ್ದಿದ್ದರಿಂದ ತಲೆ, ಬೆನ್ನು ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದು, ರಾತ್ರಿಯಿಡೀ ಹಬ್ಬದ ಸಂಭ್ರದಲ್ಲಿದ್ದ ಕಾಮತ ಗಲ್ಲಿಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.