ಆದರ್ಶ ಶಿಕ್ಷಕಿಯಿಂದ ಉದಯವಾಯಿತು ಹಲವರ ಬದುಕು..

Team Udayavani, Mar 8, 2019, 12:30 AM IST

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪಡೆದ ಆದರ್ಶ ಶಿಕ್ಷಕಿಯೊಬ್ಬರು ತಮ್ಮ ನಿವೃತ್ತಿಯ ನಂತರವೂ ಅಕ್ಷರ ದಾಸೋಹ ಮುಂದುವರೆಸುತ್ತ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷ ಏನು ಗೊತ್ತೇ? ಇವರು ಕರ್ನಾಟಕದ ಮೊದಲ ನಾಡಗೀತೆ ಎಂದೇ ಪ್ರಸಿದ್ಧಿಯಾದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ರಚಿಸಿದ ಹುಯಿಲಗೋಳ ನಾರಾಯಣರಾಯರ ಮೊಮ್ಮಗಳು. ಡಾ.ರಾಧಾ ಕುಲಕರ್ಣಿ (80), ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ನಿವೃತ್ತಿಯಾದ ಬಳಿಕ ತಮಗೆ ಬರುವ ಪಿಂಚಣಿ ಹಣವನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ 13 ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮಿಸಲಿಟ್ಟಿದ್ದಾರೆ. ಅದರಲ್ಲಿ ಮೂರು ಮಕ್ಕಳು ದಿವ್ಯಾಂಗರು!

ಈ ಇಳಿ ವಯಸ್ಸಿನಲ್ಲೂ ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕೌನ್ಸೆಲಿಂಗ್‌ ನೀಡುತ್ತಾರೆ. ಶಿಕ್ಷಕರಿಗೆ ಪಾಠ ಮಾಡುವ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಆಸರೆಯಾಗುತ್ತಾರೆ. ಯಾವುದಕ್ಕೂ ಅವರು ಇನ್ನೊಬರಿಂದ ಪ್ರತಿಫ‌ಲಾಪೇಕ್ಷೆ ಬಯಸಿಲ್ಲ. ಹುಯಿಲಗೋಳ ನಾರಾಯಣರಾಯರು ಗದಗಿನಲ್ಲಿ ನಿರ್ಮಿಸಿದ ವಿದ್ಯಾದಾನ ಸಮಿತಿ ಶಾಲೆಯಲ್ಲಿ 1960ರಲ್ಲಿ ಶಿಕ್ಷಕಿ ವೃತ್ತಿಯನ್ನು ಪ್ರಾರಂಭಿಸಿದ ಅವರು, ಮೂರೂವರೆ ವರ್ಷ ಗದಗಿನ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಮದುವೆ ಬಳಿಕ ಮುಂಬೈಗೆ ತೆರಳಿದ ನಂತರವೂ ಶಿಕ್ಷಕಿ ವೃತ್ತಿಯನ್ನು ಮುಂದುವರಿಸಿದರು. ಪತಿ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮಗೆ ಮಕ್ಕಳಾಗಲಿಲ್ಲ ಎಂಬ ಕೊರಗು ಅವರಿಗಿತ್ತು. ಮುಂಬೈನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ಅವರು, ತಮ್ಮ ಕೊರಗನ್ನು ನಿವಾರಿಸಿಕೊಂಡು ಈಗ ಸಾವಿರಾರು ಮಕ್ಕಳಿಗೆ ಅಮ್ಮನಂತಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಜೈರಾಮ್‌ ರಮೇಶ್‌, ರಾಜ್ಯದ ಮಾಜಿ ಸಚಿವ ಎಚ್‌. ಕೆ.ಪಾಟೀಲ್‌, ವೈದ್ಯಕೀಯ ಕ್ಷೇತ್ರದಲ್ಲಿ ಚಿನ್ನದ ಪದಕ ಗಳಿಸಿರುವ ಮುಂಬೈನ ಜ್ಯೋತಿ ದಾಸ್‌ ಸೇರಿ ದೇಶ ವಿದೇಶದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಅನೇಕ ಮಂದಿ ಇವರ ವಿದ್ಯಾರ್ಥಿಗಳು.

“ಉದಯವಾಣಿ’ ಜತೆ ಮಾತನಾಡಿದ ರಾಧಾ ಕುಲಕರ್ಣಿ, “ನನ್ನದು ಸರಳ ಬದುಕು. ಮದುವೆಯಲ್ಲಿ ನೀಡಿದ ರೇಷ್ಮೆ ಸೀರೆ ಒಡವೆಗಳನ್ನು ಬಿಟ್ಟರೆ ಬೇರೆ ಯಾವುದೇ ಒಡವೆ ರೇಷ್ಮೆ ಸೀರೆಗಳನ್ನು ನಾನು ಇಲ್ಲಿಯವರೆಗೂ ಖರೀದಿಸಿಲ್ಲ. ಸ್ವಂತ ಮಕ್ಕಳಿಲ್ಲ. ಸ್ವಾತಂತ್ರ್ಯ ಹೋರಾಟದ ಕುಟುಂಬ ನನ್ನಲ್ಲಿ ಸರಳ ಜೀವನ ಮತ್ತು ಆರ್ಥಿಕ ಶಿಸ್ತನ್ನು ಕಲಿಸಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರಾಧಾ ಕುಲಕರ್ಣಿ ಅವರ ಸ್ಫೂರ್ತಿಯಿಂದ ವಿವಿಧ ರೀತಿಯ ಸಮಸ್ಯೆಯಿಂದ ಬಳಲಿದವರೂ ಸಮಾಜದಲ್ಲಿ ಸಾಧಿಸಿ ತೋರಿಸಿದ್ದಾರೆ. ಅವರ ಶಿಷ್ಯೆಯೊಬ್ಬರಿಗೆ ಪಾರ್ಕಿನ್ಸನ್‌ ಕಾಯಿಲೆ ಬಂದಿತ್ತು. ತನ್ನ ಬದುಕೇ ಬರಡಾಯಿತು ಎಂದು ಯೋಚಿಸುತ್ತಿದ್ದ ಅವಳಲ್ಲಿ ಕವನ ಬರೆಯುವ ಪ್ರತಿಭೆ ಇದೆಎಂದು ರಾಧಾ ಅವರಿಗೆ ತಿಳಿದಿತ್ತು. ಅವಳಿಗೆ ಕವನ ಬರೆಯಲು ಪ್ರೇರಣೆ ನೀಡಿದರು ರಾಧಾ. ನಂತರ ಅವರ ಕವನ ಸಂಕಲನವನ್ನು ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಕಟಿಸಿ ಬಿಡುಗಡೆಗೊಳಿಸಲಾಯಿತು. ಇವತ್ತು ಅವರ ಕಥೆ, ಕವನಗಳಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅವರೇ ಹೆಸರಾಂತ ಕವಯತ್ರಿ ಪ್ರಮೀಳಾ ತೊರವಿ.

ಹಲವು ಪ್ರಶಸ್ತಿ, ಪುರಸ್ಕಾರಗಳು
70-80ರ ದಶಕದಲ್ಲಿ ಇವರು ಶಾಲಾ ಮಕ್ಕಳಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ನಾರಾಯಣರಾಯರ ಬದುಕು, ಬರಹ ಸೇರಿ 13 ಕೃತಿಗಳನ್ನು ರಚಿಸಿದ್ದಾರೆ. “ಅಂತೂ ಕಣ್ಣ ತೆರೆದವು’ ಕೃತಿಗೆ ಕಾಸರಗೋಡು ಸಾಹಿತ್ಯ ಸಂಘದ  ಪ್ರಶಸ್ತಿ ಹಾಗೂ ವಿಕಾಸ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿಸಂದಿದೆ. ಪ್ಲೇ ವೈಲ್‌ ಲರ್ನಿಂಗ್‌ ಎಂಬ ಮಾದರಿಯಲ್ಲಿ ಕಲಿಕೆಗೆ ಸಹಕಾರಿಯಾಗುವಂತಹ 12 ಆಟಿಕೆಗಳನ್ನು ಸಿದಟಛಿಪಡಿಸಿ ಇವರು ಯಶಸ್ವಿಯಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ 3 ವಿಷಯಗಳನ್ನು ಮಂಡಿಸಿ ಬಹುಮಾನ ಗಳಿಸಿದ್ದಾರೆ. ಬಿ.ಡಿ.ಜತ್ತಿ ಅವರಿಂದ ರಾಷ್ಟ್ರೀಯ ಪುರಸ್ಕಾರವೂ ಸಂದಿದೆ. ಇವರ ಸಾಧನೆ ಗಮನಿಸಿ ಕೇಂದ್ರ ಸರ್ಕಾರ 1998ರಲ್ಲಿ ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. 2015ರಲ್ಲಿ ಅಮೆರಿಕದ ಗ್ಲೋಬಲ್‌ ಪೀಸ್‌ ಯುನಿವರ್ಸಿಟಿ ಹಾಗೂ 2018ರಲ್ಲಿ ಇಂಟರ್‌ನ್ಯಾಷನಲ್‌ ಓಪನ್‌ಯುನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿವೆ.

ರಾಷ್ಟ್ರಪ್ರಶಸ್ತಿ ಪದಕ ಪ್ರದಾನ ಸಮಾರಂಭದ ಹಿಂದಿನ ದಿನ ನಮ್ಮನ್ನು ಅಂದಿನ ಪ್ರಧಾನಿ ವಾಜಪೇಯಿ ಮನೆಗೆ ಔತಣಕ್ಕೆ ಆಹ್ವಾನಿಸಿದ್ದರು. 200 ಶಿಕ್ಷಕರು ಅವರ ಮನೆಗೆ ಹೋಗಿದ್ದೆವು. ಅವರು ಪ್ರೀತಿಯಿಂದ ಆತಿಥ್ಯ ನೀಡಿದರು. ಹೊರಡುವಾಗ ಎಲ್ಲರೂ ವಾಜಪೇಯಿ ಅವರಿಗೆ ನಮಸ್ಕರಿಸುತ್ತಿದ್ದರು. ನಾನು ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಆಗ ಅವರು ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ನನ್ನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.
ರಾಧಾ ಕುಲಕರ್ಣಿ ನಿವೃತ್ತ ಶಿಕ್ಷಕಿ

ಶ್ರುತಿ ಮಲೆನಾಡತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ