ಕಾರ್ಮಿಕ ಮೃತಪಟ್ಟರೆ ಆಶ್ರಿತರಿಗೆ ಉದ್ಯೋಗ: ಕಾರಜೋಳ
Team Udayavani, Aug 28, 2020, 12:49 AM IST
ಬೆಂಗಳೂರು: ಮಲಗುಂಡಿ ಸ್ವಚ್ಛಗೊಳಿಸುವಾಗ (ಸ್ಕಾವೆಂಜರ್) ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬದ ಸದಸ್ಯರೊಬ್ಬರನ್ನು ಅನುಕಂಪದ ಆಧಾರದಡಿ ಸರಕಾರಿ ಉದ್ಯೋಗಕ್ಕೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಗುರುವಾರ ಮ್ಯಾನುವಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ 3ನೇ ರಾಜ್ಯ ಮಟ್ಟದ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅದಕ್ಕಾಗಿ ರಾಜ್ಯ ಸರಕಾರ ಹಾಗೂ ಸ್ಥಳೀಯ ಪ್ರಾಧಿಕಾರಗಳು ನಿರ್ವಹಣ ಕಾರ್ಯವನ್ನು ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ನೀಡಬೇಕು ಎಂದು ಸೂಚಿಸಿದರು.