ಸಿಎಂ ಯಡಿಯೂರಪ್ಪ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ ಈಶ್ವರಪ್ಪ
Team Udayavani, Mar 31, 2021, 6:35 PM IST
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ತಮ್ಮ ಇಲಾಖೆಯ ಕೆಲಸಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾನೂನು ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರು ಹಾಗೂ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ದೆಹಲಿಯ ವರಿಷ್ಠರಿಗೆ ದೂರು ನೀಡಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವನಾಗಿ ಕೆಲಸ ಮಾಡುತ್ತಿರುವ ತಮ್ಮ ಗಮನಕ್ಕೆ ಬಾರದಂತೆ ಸಿಎಂ ಯಡಿಯೂರಪ್ಪ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ಹಿರಿಯ ಸಚಿವನಾಗಿರುವ ತಮಗೆ ಇದರಿಂದ ನೋವಾಗಿದೆ ಎಂದಿದ್ದಾರೆ. ಒಬ್ಬ ಸಂಪುಟ ದರ್ಜೆಯ ಸಚಿವರು ತಮ್ಮ ನಾಯಕನ ವಿರುದ್ಧ ಲಿಖಿತವಾಗಿ ರಾಜ್ಯಪಾಲರು ಮತ್ತು ಕೇಂದ್ರ ನಾಯಕರಿಗೆ ದೂರು ನೀಡಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇರುವ ಲಜ್ಜೆಗೇಡಿತನದ ಗುಂಪು ಗಾರಿಕೆಗೆ ನೇರ ಸಾಕ್ಷಿ. ಬಿಜೆಪಿ ನಾಯಕರು ಇದು ಕಾಂಗ್ರೆಸ್ ಕೈವಾಡ ಎಂದು ಹೇಳದ್ದಿದ್ದರೆ ಅದು ಜನರ ಪುಣ್ಯ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿ ರೂ.ಗೆ ಸಂಬಂಧಿಸಿದಂತೆ ಕಾನೂನು ಮೀರಿ ಸುಖಾಸುಮ್ಮನೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆರ್ಡಿ ಪಿ ಆರ್ ಇಲಾಖೆಯ ಅನುದಾನವನ್ನು ನೇರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಂಚಿದ್ದಾರೆ ಎಂದು ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಭೇಟಿ ಮಾಡಿ ಈಶ್ವರಪ್ಪ ಅವರು ಲಿಖಿತ ದೂರು ನೀಡಿದ್ದಾರೆ.
ಸಂಬಂಧಿಗೆ ಹೆಚ್ಚು ಅನುದಾನ :
ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಗೆ ಬಜೆಟ್ನಲ್ಲಿ ನಿಗದಿಪಡಿಸಿದ ಅನುದಾನ ಬಿಡುಗಡೆ ಮಾಡದೆ, ಸಿಎಂ ಅವರು ನೇರವಾಗಿ ವಿಶೇಷ ಅನುದಾನದಡಿ ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷ ಮರಿಸ್ವಾಮಿ ಅವರಿಗೆ 65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮರಿಸ್ವಾಮಿ ಸಿಎಂ ಸಂಬಂಧಿಯಾಗಿದ್ದು, ಅವರೊಬ್ಬರಿಗೆ ಮಾತ್ರ ಅಷ್ಟು ಮೊತ್ತದ ಅನುದಾನ ನೀಡಿದರೆ ಉಳಿದ ಜಿಲ್ಲೆಗಳ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ ತನ್ನ ಗಮನಕ್ಕೆ ತಾರದೆ ಸಿಎಂ ಶಾಸಕರಿಗೆ 774 ಕೋ.ರೂ. ಅನುದಾನವನ್ನು ನೇರವಾಗಿ ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ. ಬಿಜೆಪಿಯ 32 ಶಾಸಕರಿಗೆ ತಲಾ 20ರಿಂದ 23 ಕೋ.ರೂ., ಬಿಜೆಪಿಯ 42 ಶಾಸಕರಿಗೆ ತಲಾ 10 ಕೋ.ರೂ.; ಕಾಂಗ್ರೆಸ್ನ 30 ಶಾಸಕರಿಗೆ ತಲಾ 5 ಕೋ.ರೂ.; ಜೆಡಿಎಸ್ನ 18 ಶಾಸಕರಿಗೆ ತಲಾ 5 ಕೋ.ರೂ. ನೀಡುವಂತೆ ಸಿಎಂ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಮೂಲಕ ಆದೇಶ ಹೊರಡಿಸಿದ್ದಾರೆ ಎಂದು ಈಶ್ವರಪ್ಪ ವಿವರಿಸಿದ್ದಾರೆ.
ವರಿಷ್ಠರಿಗೂ ದೂರು :
ಈ ಬೆಳವಣಿಗೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಇತರ ಹಿರಿಯ ನಾಯಕರ ಗಮನಕ್ಕೆ ತಂದಿದ್ದು, ಅವರ ಸಲಹೆಯಂತೆ ಈ ಅನುದಾನ ಬಿಡುಗಡೆಯನ್ನು ತಡೆಹಿಡಿಯ ಲಾಗಿದೆ. ಅದೇ ರೀತಿ ಇನ್ನೊಂದು ಪ್ರಕರಣದಲ್ಲೂ ತನ್ನ ಗಮನಕ್ಕೆ ತಾರದೆ 460 ಕೋ.ರೂ.ಗಳನ್ನು ತನ್ನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ಬಿಡುಗಡೆಗೊಳಿಸಲು ಸಿಎಂ ಸೂಚಿಸಿದ್ದಾರೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಈಶ್ವರಪ್ಪ ಉಲ್ಲೇಖೀಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಗಮನಕ್ಕೆ ತರ ಲಾ ಗಿದೆ. ಸಿಎಂ ಸಂಪುಟ ಸಚಿವರ ಗಮನಕ್ಕೆ ತಾರದೆ ಅವರ ಇಲಾಖೆಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಅಧಿಕಾರ ಹಂಚಿಕೆಯ ನಿಯಮ ಉಲ್ಲಂಘನೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ನಲ್ಲಿ ಹಿನ್ನಡೆ : ದೇವರಬೀಸನಹಳ್ಳಿ, ಬೆಳ್ಳಂದೂರು ಮತ್ತು ಮಠದ ಹಳ್ಳಿ ಅಕ್ರಮ ಡಿನೋಟಿಫಿ ಕೇಶನ್ ಪ್ರಕರಣಗಳಲ್ಲಿ ಈಗಾಗಲೇ ಹೈಕೋರ್ಟ್ನಲ್ಲಿ ಕಾನೂನು ಹಿನ್ನಡೆ ಅನುಭವಿಸಿದ್ದ ಸಿಎಂ ಬಿಎಸ್ವೈಗೆ ಮತ್ತೂಂದು ಹಿನ್ನಡೆ ಎದುರಾಗಿದೆ. ಆಪರೇಷನ್ ಕಮಲ ಸಂಬಂಧ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನ ಗೌಡ ಕಂದಕೂರು ಅವರಿಗೆ ದೊಡ್ಡ ಮೊತ್ತದ ಆಮಿಷವೊಡ್ಡಿದ ಆರೋಪದಲ್ಲಿ ಸಿಎಂ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಇದ್ದ ಮಧ್ಯಾಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿದೆ. ಈ ಸಂಬಂಧ ಪೊಲೀಸರ ತನಿ ಖೆಗೆ ಅಸ್ತು ಎಂದಿದೆ.