4 ತಿಂಗಳ ಗರ್ಭಿಣಿಗೆ ಸಿಎಂ ಇಬ್ರಾಹಿಂ ಗರ್ಭಪಾತ ಮಾಡಿಸಿದ್ಯಾಕೆ?ಆರೋಪ
Team Udayavani, Jan 3, 2017, 3:28 PM IST
ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರ ವಿರುದ್ಧ ಇದೀಗ ಭ್ರೂಣ ಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಸಿಎಂ ಇಬ್ರಾಹಿಂ ಅವರು ತಮ್ಮ ಪುತ್ರಿ ಇಫಾ ಅವರಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿ ಬಂದಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಏನಿದು ಆರೋಪ?
ಕಳೆದ 7 ತಿಂಗಳ ಹಿಂದೆ ಸಿಎಂ ಇಬ್ರಾಹಿಂ ಪುತ್ರಿ ಇಫಾ(ಇಬ್ರಾಹಿಂ ಸಹೋದರನ ಪುತ್ರನ ಜೊತೆ) ಅಪ್ಪನ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗಿದ್ದರು. ಈಗ ನಾಲ್ಕುವರೆ ತಿಂಗಳ ಗರ್ಭಿಣಿಯಾಗಿರುವ ಮಗಳು(ಇಫಾ) ತವರು ಮನೆಗೆ ಬಂದಿದ್ದಾಗ, ಸಿಎಂ ಇಬ್ರಾಹಿಂ ಅವರು ಮಗಳಿಗೆ ಕುಡಿಯುವ ಜ್ಯೂಸ್ ನಲ್ಲಿ ಗರ್ಭಪಾತದ ಮಾತ್ರೆ ಬೆರೆಸಿ ಕೊಟ್ಟಿರುವುದಾಗಿ ಸ್ವತಃ ಮಗಳೇ ಆರೋಪಿಸಿದ್ದಾರೆಂದು ವರದಿ ವಿವರಿಸಿದೆ.
ಸಿಎಂ ಫೈಸಲ್ ಹಾಗೂ ಸಿಎಂ ಇಫಾ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ಮುಂಜಾನೆ ಇಫಾಗೆ ಇಫಾ ತಾಯಿ ಹಣ್ಣಿನ ಜ್ಯೂಸ್ ಕೊಟ್ಟಿದ್ದರು. ಜ್ಯೂಸ್ ನಲ್ಲಿ ಕುಡಿದ ಬಳಿಕ ಇಫಾಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತದನಂತರ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸಿಎಂ ಇಬ್ರಾಹಿಂ ಸಹೋದರ ಸಿಎಂ ಖಾದರ್ ಅವರು ಟಿವಿ9 ಸ್ಟುಡಿಯೋದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಮಗಳ ಪ್ರೇಮ ವಿವಾಹವನ್ನು ಸಿಎಂ ಇಬ್ರಾಹಿಂ ತೀವ್ರವಾಗಿ ವಿರೋಧಿಸಿದ್ದರು. ಹಾಗಾಗಿ ಅಸಮಾಧಾನದಿಂದ ಇರುವ ಅಪ್ಪ(ಇಬ್ರಾಹಿಂ) ಬಲವಂತದಿಂದಲೇ ಮಗಳಿಗೆ ಗರ್ಭಪಾತ ಮಾಡಿಸಿದ್ದಾನೆ. ನಾನು ಅಣ್ಣನ (ಇಬ್ರಾಹಿಂ) ವಿರುದ್ಧ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ವಿಕ್ರಮ್ ಆಸ್ಪತ್ರೆಯ ವೈದ್ಯರು ಹೇಳೋದೇನು?:
ಸಿಎಂ ಇಬ್ರಾಹಿಂ ಪುತ್ರಿ ಇಫಾ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ನೀಡಿರುವ ವಿಕ್ರಮ್ ಆಸ್ಪತ್ರೆ, ನಿನ್ನೆ ರಾತ್ರಿ ಇಫಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆ ನಡೆಸಿದಾಗ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಅಪೂರ್ಣ ಗರ್ಭಪಾತದ ವಿಚಾರ ತಿಳಿದು ಬಂದಿತ್ತು. ಆಕೆ 15 ವಾರಗಳ ಗರ್ಭಿಣಿಯಾಗಿದ್ದಳು. ಜೀವ ಉಳಿಸುವ ಸಲುವಾಗಿ ಗರ್ಭಪಾತ ಮಾಡಿಸಬೇಕಾಯಿತು. ಗರ್ಭಪಾತ ಮಾಡಿಸುವ ತುರ್ತು ಸಂದರ್ಭದಲ್ಲಿ ಪತಿಯ ಅನುಮತಿಯ ಅಗತ್ಯವಿಲ್ಲ. ಇಫಾ ತಾಯಿ ಅವರ ಸಹಿ ಪಡೆದು ಗರ್ಭಪಾತ ಮಾಡಿದ್ದೇವೆ. ರಕ್ತಸ್ರಾವಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದೆ. ಸದ್ಯ ಇಫಾ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.