ಶರಾವತಿ ಬಳಿಕ ಅಘನಾಶಿನಿ ನೀರಿನ ಮೇಲೆ ಕಣ್ಣು!

Team Udayavani, Jun 26, 2019, 3:06 AM IST

ಚಿತ್ರದುರ್ಗ: ರಾಜಧಾನಿ ಬೆಂಗಳೂರಿಗೆ ಶರಾವತಿ ನದಿ ನೀರು ನೀಡುವ ಪ್ರಸ್ತಾವಿತ ಯೋಜನೆಗೆ ಪರ-ವಿರೋಧದ ಚರ್ಚೆ ನಡೆದಿರುವಾಗಲೇ ಬೆಂಗಳೂರು ಸೇರಿದಂತೆ ಬಯಲುಸೀಮೆಯ ಐದಾರು ಜಿಲ್ಲೆಗಳಿಗೆ ಅಘನಾಶಿನಿ ನದಿ ನೀರನ್ನು ಹರಿಸಲು ಸದ್ದಿಲ್ಲದೆ ಮತ್ತೂಂದು ಯೋಜನೆ ಸಿದ್ಧಗೊಂಡಿದೆ!

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಉಗಮವಾಗಿರುವ ಅಘನಾಶಿನಿ ನದಿ ನೀರನ್ನು ಶಿವಮೊಗ್ಗ- ಚಿಕ್ಕಮಗಳೂರು- ಚಿತ್ರದುರ್ಗ- ತುಮಕೂರು ಮೂಲಕ ಬೆಂಗಳೂರಿಗೆ ಹರಿಸುವುದು ಯೋಜನೆಯ ಉದ್ದೇಶ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಂಕರ ಹೊಂಡದಲ್ಲಿ ಉಗಮವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ಈ ನದಿ, ಕುಮಟಾ ತಾಲೂಕಿನ ಅಘನಾಶಿನಿ ಎಂಬ ಗ್ರಾಮದ ಬಳಿ ಅರಬ್ಬಿ ಸಮುದ್ರ ಸೇರುತ್ತದೆ.

ಭೌಗೋಳಿಕವಾಗಿ ಅತಿ ಕಡಿಮೆ ಅಂದರೆ 1895 ಚದರ ಕಿಮೀ ಜಲಾನಯನ ಪ್ರದೇಶ ಹೊಂದಿದ್ದು, ಮಳೆಗಾಲದಲ್ಲಿ 100-120 ಟಿಎಂಸಿ ಅಡಿ ನೀರು ಸಮುದ್ರ ಸೇರುತ್ತದೆ. ಇದರಲ್ಲಿ ಕೇವಲ 50 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಇದೇ ನದಿಗೆ ಹೇಮಾಗ್ನಿನಿ ಪ್ರದೇಶದಲ್ಲಿ ಜಲಾಶಯ ನಿರ್ಮಿಸಿ 50 ಟಿಎಂಸಿ ನೀರು ಬಳಕೆ ಮಾಡುವ ಜಲ ವಿದ್ಯುತ್‌ ಯೋಜನೆ ರೂಪಿಸಲಾಗಿತ್ತು.

ಆದರೆ ಕೆಲ ಕಾರಣಗಳಿಂದ ಆ ಯೋಜನೆ ಸ್ಥಗಿತಗೊಂಡಿತ್ತು. ಭೌಗೋಳಿಕವಾಗಿ ಹೇಮಾಗ್ನಿನಿ ಜಲಾಶಯದ ಸ್ಥಳ ಟೋಪೋ ಶೀಟ್‌ (Topo Sheet) ಪ್ರಕಾರ 470 ಮೀಟರ್‌ ಸಮುದ್ರ ಮಟ್ಟದಿಂದ ಮೇಲಿದೆ. ಹಾಗಾಗಿ ಈಗ ಇಲ್ಲಿಂದ ಪೈಪ್‌ಲೈನ್‌ ಮೂಲಕ ಲಿಫ್ಟ್‌ ಮಾಡಿ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ನೀಡಲು ಯೋಜನೆ ಸಿದ್ಧವಾಗಿದೆ.

ಎಲ್ಲಿಂದ ಎಲ್ಲಿಗೆ?: ಅಘನಾಶಿನಿ ನದಿಯ ಹೇಮಾಗ್ನಿನಿ ಜಲಾಶಯದಿಂದ ಸಿದ್ದಾಪುರ, ಸಾಗರ ತಾಲೂಕುಗಳ ಮೂಲಕ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ನದಿ ದಾಟಿಕೊಂಡು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲಕ ಹಟ್ಟಿ ಮೂಡಗೆರೆ ಗ್ರಾಮದ ಸಮೀಪ ವೇದಾವತಿ ನದಿ ಪಾತ್ರಕ್ಕೆ ಈ ನೀರನ್ನು ಬಿಡಲಾಗುತ್ತದೆ. ಇಲ್ಲಿಂದ ಗುರುತ್ವಾಕರ್ಷಣೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ.

ವಿವಿ ಸಾಗರದ ಶೇಖರಣಾ ಸಾಮರ್ಥ್ಯ 30 ಟಿಎಂಸಿ ಅಡಿ ಇದ್ದು ಈ ಜಲಾಶಯವನ್ನು ಭರ್ತಿ ಮಾಡಲಾಗುತ್ತದೆ. ಈ ಜಲಾಶಯದಿಂದ ಮತ್ತೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಬೋರನಕಣಿವೆ ಡ್ಯಾಂಗೆ ಲಿಫ್ಟ್‌ ಮಾಡಿ ನೀರು ತರಲಾಗುತ್ತದೆ. ಬೋರನಕಣಿವೆ ಡ್ಯಾಂ ಸುಮಾರು 3 ಟಿಎಂಸಿ ಶೇಖರಣಾ ಸಾಮರ್ಥ್ಯ ಹೊಂದಿದೆ.

ಬೋರನಕಣಿವೆ ಡ್ಯಾಂ ಮೂಲಕ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿ ಜಲಾಶಯಕ್ಕೆ ನೀರು ಲಿಫ್ಟ್‌ ಮಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿ- ಗಂಟೇನಹಳ್ಳಿ- ಜೋಳೂರು- ಬೆಳ್ಳಾವಿ- ಕೋರಾ- ಕ್ಯಾತಸಂದ್ರ- ದಾಬಸ್‌ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸಲಾಗುತ್ತದೆ.

ನಂತರ ಅಲ್ಲಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶ ಯೋಜನೆಯಲ್ಲಿದೆ. ಹೇಮಾಗ್ನಿನಿ ಡ್ಯಾಂನಿಂದ ವಿವಿ ಸಾಗರ-ಬೋರನಕಣಿವೆ ಡ್ಯಾಂ ಸೇರಿದಂತೆ ಮೂರು ಹಂತದಲ್ಲಿ 450 ಮೀಟರ್‌ ಎತ್ತರದಷ್ಟು ಲಿಫ್ಟ್‌ ಮಾಡಲಾಗುತ್ತದೆ.

ಕೇಂದ್ರದ ಒಪ್ಪಿಗೆ ಸಾಧ್ಯತೆ: ಅತಿವೃಷ್ಟಿ, ಅನಾವೃಷ್ಟಿ, ತೀವ್ರ ಬರ, ಕುಡಿಯುವ ನೀರಿನ ಹಾಹಾಕಾರ ಇರುವ ಕಡೆಗಳಿಗೆ ಲಭ್ಯ ಇರುವ ನದಿ ಪಾತ್ರದ ನೀರಿನಿಂದ ಕೊರತೆ ಇರುವ ನದಿ ಪಾತ್ರಕ್ಕೆ ನೀರು ಹರಿಸುವ ದೃಷ್ಟಿಯಿಂದ 1980ರಲ್ಲಿ ಕೇಂದ್ರ ಸರ್ಕಾರ ಜಲಸಂಬಂಧಿ ದೂರಗಾಮಿ ಯೋಜನೆ ((National perspective plan-NPP) ರೂಪಿಸಿದೆ.

ಇದರಡಿಯಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ National Water development Agency-NWDA) ದೇಶದ ನದಿ ಜೋಡಣೆಗಳ ಕಾರ್ಯ ನಿರ್ವಹಿಸಲಿದೆ. ಈ ಯೋಜನೆಯಡಿ ಕುಡಿಯುವ ನೀರು ನೀಡುವುದು ಕಡ್ಡಾಯವಾಗಿದ್ದು ಕೇಂದ್ರ ಸರ್ಕಾರ ಹಾಗೂ ಹಸಿರು ಪೀಠ ಈ ಯೋಜನೆಗೆ ಸಮ್ಮತಿ ನೀಡುವ ಸಾಧ್ಯತೆ ಇದೆ.

ಫಲಾನುಭವಿ ಜಿಲ್ಲೆಗಳು: ಅಘನಾಶಿನಿ ನದಿ ನೀರನ್ನು ಲಿಫ್ಟ್‌ ಮಾಡುವುದರಿಂದ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಿಗೆ ನೀರು ಲಭ್ಯವಾಗಲಿದೆ.

ತಾಂತ್ರಿಕವಾಗಿ ಸಮಂಜಸವಾದ ಹಾಗೂ ಪರಿಸರಕ್ಕೆ ಹಾನಿ ಇಲ್ಲದ ಬಹುತೇಕ ರಸ್ತೆ ಮಾರ್ಗದಲ್ಲಿ ಪೈಪ್‌ಲೈನ್‌ ಅಳವಡಿಸಿಕೊಂಡು ಸುಮಾರು 350 ಕಿಮೀ ದೂರ ನೀರು ಹರಿಸಲು ಸೂಕ್ತವಾದ ಯೋಜನೆ ಅಘನಾಶಿನಿ ಯೋಜನೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಒಪ್ಪಿ ಅನುಷ್ಠಾನ ಮಾಡಿದರೆ ಐದಾರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ.
-ಟಿ.ಬಿ. ಜಯಚಂದ್ರ, ಮಾಜಿ ಸಚಿವ

ಈ ಯೋಜನೆಯಿಂದ ಅರಣ್ಯ ಸೇರಿದಂತೆ ಪರಿಸರಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಮುಂದಿನ 2050ರ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಅಘನಾಶಿನಿಯಿಂದ ಬರುವ ನೀರನ್ನು ವಿವಿ ಸಾಗರದಲ್ಲಿ ಸ್ಟೋರ್‌ ಮಾಡಿ ಅಲ್ಲಿಂದ ಲಿಫ್ಟ್‌ ಮಾಡಲಾಗುತ್ತದೆ.
-ಈಶ್ವರಯ್ಯ, ನಿವೃತ್ತ ಕಾರ್ಯಪಾಲಕ ಅಭಿಯಂತರ, ಯೋಜನೆಯ ತಾಂತ್ರಿಕ ಸಲಹೆಗಾರ

* ಹರಿಯಬ್ಬೆ ಹೆಂಜಾರಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ