ಭೀಕರ ಅಪಘಾತ: ನಗರದ ನಾಲ್ವರ ಸಾವು
Team Udayavani, Mar 11, 2019, 5:45 AM IST
ಸಕಲೇಶಪುರ: ಕಾರು- ಸರ್ಕಾರಿ ಬಸ್ ನಡುವಿನ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ನಾಲ್ವರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿ ಘಾಟ್ನಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಬೆಂಗಳೂರಿನ ರಾಜಾನುಕುಂಟೆ ನಿವಾಸಿಗಳಾದ ಕಾರು ಚಾಲಕ ಜಗದೀಶ್ (30), ಗೌರಮ್ಮ (45), ಚನ್ನಯ್ಯ (50), ಭುವನೇಶ್ (6) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಶವಂತಪುರ ನಿವಾಸಿಗಳಾದ ಭವ್ಯಾ, ನಾಗರತ್ನ ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಮಾರನಹಳ್ಳಿ ಸಮೀಪದ ಜೋಡಿ ತಿರುವಿನ ಬಳಿ ಭಾನುವಾರ ಮುಂಜಾನೆ ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಗೂ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖೀ ಸಂಭವಿಸಿದೆ. ಪರಿಣಾಮ ರಕ್ತಸ್ರಾವದಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಗಾಯಾಳುಗಳ ಪೈಕಿ ನಾಗರತ್ನ ಯಶವಂತಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.