ನಾಳೆಯಿಂದ ಸಿಎಂ ಬೊಮ್ಮಾಯಿ ಎರಡು ದಿನಗಳ ಕಾಲ ದಿಲ್ಲಿ ಪ್ರವಾಸ
Team Udayavani, Aug 6, 2022, 7:25 AM IST
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರದಿಂದ ಎರಡು ದಿನಗಳ ಕಾಲ ನವದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಬಿಜೆಪಿ ವರಿಷ್ಠರ ಬಳಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದಾಗ ದೆಹಲಿಯಲ್ಲಿ ಚರ್ಚಿಸುವ ಬಗ್ಗೆ ಹೇಳಿದ್ದರು ಎಂದು ತಿಳಿದು ಬಂದಿದೆ.
ಕಾರ್ಯಕ್ರಮದ ಪ್ರಕಾರ ಶನಿವಾರ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂಧ್ರಮೋದಿ ಅಧ್ಯಕ್ಷತೆಯಲ್ಲಿ ನಡೆಯುವ “ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಸಿಎಂ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.
ಅಲ್ಲಿಯೇ ವಾಸ್ತವ್ಯ ಹೂಡಲಿರುವ ಸಿಎಂ ಭಾನುವಾರ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಆ.15ರ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.