ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ತೇನೆ

ನಾಯಕರ ಪ್ರತಿಷ್ಠೆಯ ತೀರ್ಮಾನಗಳಿಂದ ಹಿನ್ನಡೆಯಾಗಿದೆ: ದಿನೇಶ್‌

Team Udayavani, May 25, 2019, 6:02 AM IST

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೀನಾಯ ಸೋಲು ಕಂಡಿರುವುದರಿಂದ ಕಾಂಗ್ರೆಸ್‌ ಸಾಕಷ್ಟು ಮುಜುಗರ ಎದುರಿಸುವಂತಾಗಿದ್ದು, ಸೋಲಿನ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿರುವುದಾಗಿ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಈ ಚುನಾವಣೆಯ ಫ‌ಲಿತಾಂಶ, ಕಾಂಗ್ರೆಸ್‌ ಪಕ್ಷ ಮತ್ತು ಮೈತ್ರಿ ಸರ್ಕಾರದ ಮೇಲೆ ಬೀರಿರುವ ಪರಿಣಾಮ ಹಾಗೂ ಮುಂದಿನ ಪಕ್ಷದ ಕಾರ್ಯ ಚಟುವಟಿಕೆಯ ಬಗ್ಗೆ ‘ಉದಯವಾಣಿ’ ಯೊಂದಿಗೆ ಮಾತನಾಡಿದ್ದಾರೆ.

ಚುನಾವಣೆ ಫ‌ಲಿತಾಂಶದಿಂದ ಮೈತ್ರಿಗೆ ಹಿನ್ನಡೆಯಾಯ್ತು ಅನಿಸುತ್ತಾ ?
ಒಂದು ರೀತಿಯಲ್ಲಿ ಈ ಚುನಾವಣೆಯಲ್ಲಿ ನಾವು ಮೊದಲೇ ಹೊಂದಾಣಿಕೆ ಮಾಡಿಕೊಂಡಿ ದ್ದರೆ, ಒಳ್ಳೆಯ ಫ‌ಲಿತಾಂಶ ತರಬಹುದಿತ್ತು. ಎರಡೂ ಪಕ್ಷಗಳಿಂದ ಲೋಪವಾಗಿದೆ ಎಂದು ನಮಗೆ ಈಗ ಅರಿವಾಗಿದೆ. ಕೆಲವು ಪ್ರತಿಷ್ಠೆಗೆ ತೆಗೆದುಕೊಂಡ ತೀರ್ಮಾನ ದಿಂದ ಈ ರೀತಿಯ ಹಿನ್ನಡೆಯಾಗಿದೆ ಎಂದು ಅನಿಸಿದೆ. ಮುಂದಿನ ದಿನಗಳಲ್ಲಿ ಹೊಂದಾಣಿಕೆ ಯಿಂದ ಕೆಲಸ ಮಾಡಲು ತೀರ್ಮಾನಿಸಿದ್ದೇವೆ.

ಮುಖ್ಯಮಂತ್ರಿ ಬದಲಾವಣೆಗೆ ಪ್ರಯತ್ನ ನಡೆಸಿದ್ದೀರಾ ?
ಆ ರೀತಿಯ ಯಾವುದೇ ಬದಲಾವಣೆಯಿಲ್ಲ. ನಿನ್ನೆ ರಾತ್ರಿಯೇ ಮುಖ್ಯಮಂತ್ರಿ ಹಾಗೂ ದೇವೇಗೌಡರನ್ನು ಭೇಟಿ ಮಾಡಿ ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಇವತ್ತು ಕೂಡ ಸಭೆ ಸೇರಿ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಐದು ವರ್ಷ ಅವರೇ ಮುಂದುವರಿಯುತ್ತಾರೆ.

ಈ ಫ‌ಲಿತಾಂಶಕ್ಕೆ ನಿಮ್ಮ ನಾಯಕರ ಗೊಂದಲದ ಹೇಳಿಕೆಗಳೇ ಕಾರಣವಾಯ್ತು ಅನಿಸ್ತಾ?
ಅವುಗಳನ್ನು ನಾವು ತಡೆಯಬಹುದಿತ್ತು. ಎರಡೂ ಕಡೆಯಿಂದ ತಡೆಯಲು ಅವಕಾಶ ಇತ್ತು. ನಾವು ಸ್ವಲ್ಪ ಯಶಸ್ವಿಯಾಗಿ ಕೋಆರ್ಡಿನೇಷನ್‌ ಮಾಡಲು ಆಗಲಿಲ್ಲ. ಇಂದು ಸಚಿವರ ಸಭೆಯಲ್ಲಿ ಅದರ ಬಗ್ಗೆ ಚರ್ಚಿಸಿ, ರಾಜಕೀಯವಾಗಿ ಯಾರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದೇವೆ. ಸಚಿವರ ಸಭೆಯಲ್ಲಿಯೂ ಸಿಎಂ ಅದನ್ನೇ ಹೇಳಿದ್ದಾರೆ. ಯಾರಾದರೂ ಅನಗತ್ಯ ಹೇಳಿಕೆ ನೀಡಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ.

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಾಗಿದೆ ಎಂದು ಶಾಸಕರು ಹೇಳುತ್ತಿದ್ದಾರಲ್ಲಾ ?
ದೇಶದ ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ಗೆ ಸೋಲಾಗಿದೆ. ಮೈತ್ರಿಯಿಂದಲೇ ಸೋಲಾಯಿತು ಎನ್ನುವುದು ಸರಿಯಲ್ಲ. ಈ ಬಗ್ಗೆ ಅದರ ವಿಶ್ಲೇಷಣೆ ಸರಿಯಲ್ಲ

ಬಿಜೆಪಿಯವರು ಮೈತ್ರಿ ಸರ್ಕಾರ ಉರುಳಿಸಲು ಪ್ರಯತ್ನ ನಡೆಸಿದ್ದಾರಲ್ಲಾ ?
ಕಳೆದ ಒಂದು ವರ್ಷದಿಂದ ಬಿಜೆಪಿಯವರು ಈ ಪ್ರಯತ್ನ ನಡೆಸಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಹಿಡಿಬೇಕು ಎನ್ನುವುದು ಅವರ ಅಜೆಂಡಾ. ಈಗಲೂ ಆಪರೇಷನ್‌ ಕಮಲ ಮಾಡುವ ಪ್ರಯತ್ನ ನಡೆಸುತ್ತಾರೆ. ಸರ್ಕಾರ ಬೀಳಿಸಲು ಕುದುರೆ ವ್ಯಾಪಾರ ಮಾಡಲು ಕಸರತ್ತು ನಡೆಸುತ್ತಾರೆ. ಆದರೆ, ನಾವು ಹೆಚ್ಚು ಸಮನ್ವಯತೆಯಿಂದ ಕೆಲಸ ಮಾಡಿ, ಅವರ ಆಪರೇಷನ್‌ ಕಮಲಕ್ಕೆ ಅವಕಾಶ ಕೊಡಬಾರದು ಎಂಬ ತೀರ್ಮಾನ ಕೈಗೊಂಡಿದ್ದೇವೆ. ಅದನ್ನು ಎದುರಿಸುವ ಶಕ್ತಿ ನಮಗೆ ಇದೆ.

ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಸುವ ಬಗ್ಗೆ ಚರ್ಚೆಯಾಗಿದೆಯಾ?
ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ.

ನೀವು ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೀರಾ ?
ಹೌದು, ಈ ಚುನಾವಣೆಯ ಸಂಪೂರ್ಣ ಜವಾಬ್ದಾರಿ ನಾನು ಹೊರಬೇಕಾಗುತ್ತದೆ. ನಾನು ಅಧ್ಯಕ್ಷನಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಕಳುಹಿಸುತ್ತೇನೆ.

ಮೋದಿ ಅಲೆಯಿಂದಲೇ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು ಅನಿಸುತ್ತಾ ?  ಪುಲ್ವಾಮ ದಾಳಿಗೂ ಮೊದಲು ದೇಶದಲ್ಲಿ ಮೋದಿ ಅಲೆ ಕಡಿಮೆಯಾಗಿತ್ತು. ಆ ದಾಳಿಯ ನಂತರ ಅದನ್ನು ಭಾವನಾತ್ಮಕವಾಗಿ ಜನರ ಬಳಿಗೆ ತೆಗೆದುಕೊಂಡು ಹೋದರು. ಐದು ವರ್ಷದ ಅವರ ವಿಫ‌ಲ ಆಡಳಿತದ ಬಗ್ಗೆ ಚರ್ಚೆ ನಡೆಯಲು ಅವಕಾಶವೇ ಸಿಗಲಿಲ್ಲ. ಮೋದಿ ಇಲ್ಲದಿದ್ದರೆ ದೇಶಕ್ಕೆ ರಕ್ಷಣೆ ಇಲ್ಲ ಎಂಬ ವಾತಾವರಣ ಸೃಷ್ಟಿಸಿದರು. ಅದೇ ಚುನಾವಣೆ ಸೋಲಿಗೆ ಕಾರಣವಾಯಿತು. •ಇವಿಎಂ ಬಗ್ಗೆ ನಿಮಗೆ ಅನುಮಾನ ಇದೆಯಾ ? ನನಗೆ ಅದರ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಅಂತಿಮವಾಗಿ ನಾವು ಜನರ ತೀರ್ಪಿಗೆ ತಲೆ ಬಾಗಲೇ ಬೇಕು. ಮುಂದೆ ನಮ್ಮ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ನಮ್ಮ ಪಕ್ಷ ಮೊದಲಿನಿಂದಲೂ ಜನ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ.
-ಶಂಕರ ಪಾಗೋಜಿ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ