ನಿಲ್ಲದ ಖಾತೆ ಅತೃಪ್ತಿ
Team Udayavani, Aug 9, 2021, 7:30 AM IST
ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತೃಪ್ತಿಯ ಸವಾಲು ಎದುರಿಸುತ್ತಿದ್ದಾರೆ.
ಸದ್ಯ ಮೂವರು ಸಚಿವರು ತಮಗೆ ಲಭಿಸಿರುವ ಖಾತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಬೇರೆ ಖಾತೆ ನೀಡದಿದ್ದರೆ ಮುಂದೆ ಏನು ಎಂಬ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಆನಂದ್ ಸಿಂಗ್ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವರಾಗಿರುವ ಎಂ.ಟಿ.ಬಿ. ನಾಗರಾಜ್ ತಮಗೆ ಹಿಂಭಡ್ತಿ ನೀಡಿದಂತಾಗಿದೆ ಎಂದು ದೂರಿದ್ದಾರೆ.
ಮುಜರಾಯಿ ಮತ್ತು ವಕ್ಫ್ ಖಾತೆ ಪಡೆದಿರುವ ಶಶಿಕಲಾ ಜೊಲ್ಲೆ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಅವರನ್ನು ರವಿವಾರ ಭೇಟಿ ಮಾಡಿದ ಸಚಿವ ಆನಂದ್ ಸಿಂಗ್, ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಯಡಿಯೂರಪ್ಪ ಅವರನ್ನು ನಂಬಿ ಮೈತ್ರಿ ಸರಕಾರಕ್ಕೆ ಸಡ್ಡು ಹೊಡೆದು ಮೊದಲು ರಾಜೀನಾಮೆ ಕೊಟ್ಟವನು ನಾನು. ಆದರೆ ನನ್ನನ್ನು ಸರಿಯಾಗಿ ನಡೆಸಿಕೊಳ್ಳು ತ್ತಿಲ್ಲ. ಯಡಿಯೂರಪ್ಪ ಯಾವ ಖಾತೆ ಕೊಟ್ಟಿದ್ದರೂ ನಡೆಯು ತ್ತಿತ್ತು. ಆದರೆ ಈಗ ಬೊಮ್ಮಾಯಿ ಮುಖ್ಯಮಂತ್ರಿ. ನಮ್ಮ ಹಕ್ಕು ನಾವು ಪಡೆಯಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಂ.ಟಿ.ಬಿ. ನಾಗರಾಜ್ ಅವರೂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, 3 ದಿನಗಳಲ್ಲಿ ಬೇರೆ ಖಾತೆ ನೀಡದಿದ್ದರೆ ತಮ್ಮ ದಾರಿ ತಮಗೆ ಎನ್ನುವ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಕಡಿಮೆ ಮಹತ್ವ ಹೊಂದಿರುವ ಖಾತೆ ನೀಡಿದ್ದು, ಹಿಂಭಡ್ತಿ ನೀಡಿದಂತಾಗಿದೆ ಎಂದು ಅವರು ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ವರಿಷ್ಠರ ಜತೆ ಖಾತೆ ಬದಲಾವಣೆ ಬಗ್ಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಸದ್ಯ ಸಿಎಂ ಭರವಸೆ ನಂಬಿ ಬಂದಿದ್ದೇನೆ ಎಂದು ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.
ಸಂಪುಟ ಸ್ಥಾನಮಾನ ಬೇಡ: ಬಿಎಸ್‌ವೈ :
ಸಂಪುಟ ದರ್ಜೆ ಸ್ಥಾನಮಾನ ನೀಡಿದ ರಾಜ್ಯ ಸರಕಾರದ ನಿರ್ಧಾರವನ್ನು ಮಾಜಿ ಸಿಎಂ ಯಡಿಯೂರಪ್ಪ ನವರು ಒಪ್ಪಿಕೊಂಡಿಲ್ಲ. ಆದೇಶ ವಾಪಸ್ ಪಡೆಯುವಂತೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಮಾಜಿ ಸಿಎಂಗಳಿಗೆ ನೀಡುವ ಸವಲತ್ತುಗಳನ್ನು ಮಾತ್ರ ನೀಡಿದರೆ ಸಾಕು ಎಂದವರು ಉಲ್ಲೇಖೀಸಿದ್ದಾರೆ.
ಬಿಎಸ್‌ವೈ ನಿರ್ಧಾರ: ಸಿದ್ದು ಸ್ವಾಗತ :
ಬಿಎಸ್‌ವೈ ನಿರ್ಧಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಪುಟ ದರ್ಜೆ ಸ್ಥಾನ ನಿರಾಕರಿಸಿ ಎಂದು ನಾನೇ ಅವರಿಗೆ ಹೇಳಬೇಕು ಅಂದುಕೊಂಡಿದ್ದೆ. ಅವರೇ ನಿರಾಕರಿಸಿದ್ದು ಉತ್ತಮ ನಿರ್ಧಾರ ಎಂದಿದ್ದಾರೆ.
ಮೊದಲು ಕೆಲಸ ಮಾಡಲಿ: ಮುನಿರತ್ನ :
ಮೊದಲು ಬಿಜೆಪಿಯಲ್ಲಿ ಕೆಲಸ ಮಾಡಬೇಕು. ಪಕ್ಷಕ್ಕೆ ಬಂದ ಕೂಡಲೇ ದೊಡ್ಡ ಖಾತೆ ಬೇಕು ಎನ್ನುವುದು ಸರಿಯಲ್ಲ. ಬೇರೆ ಪಕ್ಷದಿಂದ ಬಂದಿದ್ದೇವೆ. ಸದ್ಯ ನಮ್ಮ ಕೊಡುಗೆ ಏನೂ ಇಲ್ಲದೆ ಇರುವಾಗ ಚುನಾವಣೆಗೆ ನಿಂತು, ಗೆದ್ದು ಶಾಸಕರಾಗುವಂತೆ ಮಾಡಿದ್ದಾರೆ. ಸ್ವಲ್ಪ ದಿನ ಕೆಲಸ ಮಾಡಿದ ಬಳಿಕ ಖಾತೆ ಕೇಳಬೇಕು ಎಂದು ಸಚಿವ ಮುನಿರತ್ನ ಅತೃಪ್ತರಿಗೆ ಟಾಂಗ್ ನೀಡಿದ್ದಾರೆ.
ಆನಂದ್ ಸಿಂಗ್, ಎಂ.ಟಿ.ಬಿ. ನಾಗರಾಜ್ ಅವರನ್ನು ಕರೆದು ಮಾತನಾಡಿದ್ದೇನೆ. ಅವರ ಭಾವನೆ ಅರ್ಥವಾಗುತ್ತದೆ. ಶೀಘ್ರವೇ ಸರಿಪಡಿಸ ಲಾಗುತ್ತದೆ ಎಂದು ಭರವಸೆ ನೀಡಿದ್ದೇನೆ.– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಖಾತೆ ಹಂಚಿಕೆಯಲ್ಲಿ ಗೊಂದಲವಿಲ್ಲ. ಆನಂದ್ ಸಿಂಗ್ ಮತ್ತು ಎಂ.ಟಿ.ಬಿ. ನಾಗರಾಜ್ ತಮ್ಮ ಭಾವನೆ ಹೇಳಿಕೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲಾಗುತ್ತದೆ.– ಕೆ.ಎಸ್. ಈಶ್ವರಪ್ಪ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್
ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್
ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ
ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ
ಕೋವಿಡ್ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್