ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ನಿಖಿಲ್‌

Team Udayavani, Jun 5, 2019, 3:00 AM IST

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿರುವ ನಿಖಿಲ್‌ ಕುಮಾರಸ್ವಾಮಿ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ನಿಖಿಲ್‌, ರಾಜಕೀಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದ ಪಡೆದುಕೊಂಡೆ. ಈ ಎಲ್ಲ ಹಿರಿಯರು, ದೊಡ್ಡ ದೊಡ್ಡ ನಾಯಕರ ಭೇಟಿ ನನ್ನಲ್ಲಿ ಹೊಸ ಹುರುಪು, ಚೈತನ್ಯ ಮೂಡಿಸುತ್ತಿದೆ.

ರಾಜಕಾರಣದಲ್ಲಿ ಐದು ದಶಕಗಳನ್ನು ಕಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಅವಕಾಶ ಸೋಮವಾರ ಸಿಕ್ಕಿತು. ಆ ಸಮಯದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನೂ ಭೇಟಿ ಮಾಡಿದೆ.

ಬಹಳ ಖುಷಿಯಿಂದ ಮಲ್ಲಿಕಾರ್ಜುನ ಖರ್ಗೆ ನನ್ನನ್ನು ಆಶೀರ್ವದಿಸಿ ಮುನ್ನಡೆಸುವ ದಾರಿ ತೋರಿಸಿದರು. ಅವರ ಅನುಭವದ ಮಾತುಗಳು ರಾಜಕೀಯ ಕ್ಷೇತ್ರದ ಅನೇಕ ಮುಖಗಳನ್ನು ಪರಿಚಯಿಸಿತು ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಣಯಕ್ಕೆ ಪೂರಕವಾಗಿ ಜನರು ಒಪ್ಪುವಂತೆ ನಮ್ಮ ನಡೆ, ನುಡಿ, ಬದ್ಧತೆಗಳು ಇರಬೇಕೆಂದು ಕಿವಿಮಾತು ಹೇಳಿದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಕೂಡ ಧೈರ್ಯದಿಂದ ಮುಂದುವರಿಯುವಂತೆ ಹುರಿದುಂಬಿಸಿದರು. ಈ ಭೇಟಿಯು ಚುನಾವಣೆಯ ಸೋಲು-ಗೆಲುವುಗಳಿಂದ ಭಿನ್ನವಾಗಿ ಜನಸೇವೆಯ ಮೂಲ ಉದ್ದೇಶಗಳನ್ನು ಕಾರ್ಯಕರ್ತರ ಜತೆಗೆ ಒಟ್ಟಾಗಿ ದುಡಿದು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನನಗೆ ಪ್ರೇರಣೆ ನೀಡಿದೆ ಎಂದು ನಿಖಿಲ್‌ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ