ಒಕ್ಕಲಿಗ ನಾಯಕರ ಸಭೆ

Team Udayavani, Nov 12, 2019, 3:07 AM IST

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ನಾಯಕತ್ವದ ಕುರಿತು ಮತ್ತು ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಒಕ್ಕಲಿಗ ಪ್ರಾಬಲ್ಯ ಉಳಿಸಿಕೊಳ್ಳುವ ಕುರಿತು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಹಿರಿಯ ಒಕ್ಕಲಿಗ ನಾಯಕರ ಸಭೆ ನಡೆದಿದೆ.

ಕೆಪಿಸಿಸಿಯಲ್ಲಿ ಉಪ ಚುನಾವಣೆ ಸಂಬಂಧ ಪಕ್ಷದ ಹಿರಿಯ ನಾಯಕರ ಸಭೆಯ ನಂತರ ಒಕ್ಕಲಿಗ ಸಮುದಾಯದ ನಾಯಕರು, ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕೃಷ್ಣ ಬೈರೇಗೌಡ, ಟಿ.ಬಿ. ಜಯಚಂದ್ರ, ಚಲುವರಾಯಸ್ವಾಮಿ, ಎಂ.ಕೃಷ್ಣಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಈಗಾಗಲೇ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಡಿ.ಕೆ.ಶಿವಕುಮಾರ್‌ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವುದರಿಂದ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ಪಕ್ಷದ ವೇದಿಕೆಯಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗುವ ಸಂಭವ ಎದುರಾದರೆ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಜೆಡಿಎಸ್‌ ಜತೆ ಮೈತ್ರಿ ಸರ್ಕಾರ ರಚನೆ ಮಾಡುವ ಕುರಿತಂತೆಯೂ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರು ಸಭೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಆದರೆ, ಈಗಾಗಲೇ ಉಪ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವುದರಿಂದ ಚುನಾವಣೆ ಫ‌ಲಿತಾಂಶ ಬಂದ ನಂತರ ನಾಯಕತ್ವ ಬದಲಾವಣೆಗೆ ಬಹಿರಂಗ ಬೇಡಿಕೆ ಕೇಳಿ ಬರುವ ಸಾಧ್ಯತೆ ಇದೆ.  ಸೋಮವಾರ ನಡೆದ ಒಕ್ಕಲಿಗ ನಾಯಕರ ಸಭೆಯಲ್ಲಿ ಪ್ರಮುಖವಾಗಿ ಬೆಂಗಳೂರಿನ ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಅಗತ್ಯ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಅದರ ಭಾಗವಾಗಿಯೇ ಯಶವಂತಪುರ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಿಯಾ ಕೃಷ್ಣ ಅಥವಾ ನಾಗರಾಜ್‌ ಎನ್ನುವವರಿಗೆ ಟಿಕೆಟ್‌ ಕೊಡಿಸಲು ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಯಶವಂತಪುರದಲ್ಲಿ ಸಿದ್ದರಾಮಯ್ಯ ಆಪ್ತರಾಗಿರುವ ನಾಯ್ಡು ಸಮುದಾಯಕ್ಕೆ ಸೇರಿರುವ ರಾಜಕುಮಾರ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದ್ದು, ಅವರ ಬದಲು ಒಕ್ಕಲಿಗ ಸಮುದಾಯಕ್ಕೆ ಟಿಕೆಟ್‌ ಕೊಡಿಸಲು ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿ ಈಗಾಗಲೇ ಕುರುಬ ಸಮುದಾಯ ಸಿದ್ದರಾಮಯ್ಯ ಆಪ್ತ ಶಿವರಾಜ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿರುವುದರಿಂದ ಆ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ನನ್ನ ನೇತೃತ್ವದಲ್ಲಿ ಯಾವುದೇ ಸಭೆ ನಡೆದಿಲ್ಲ. ಕೆಪಿಸಿಸಿಗೆ ಇನ್ನೂ ನನ್ನ ನೇತೃತ್ವ ಬಂದಿಲ್ಲ.
-ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ...

  • ಬೆಂಗಳೂರು: ನಾಲ್ವರು ಆರೋಪಿಗಳು ಮಹಜರು ಕಾರ್ಯದ ವೇಳೆ ಪೊಲೀಸ್‌ ಸಿಬಂದಿಯ ಮೇಲೆ ತಿರುಗಿಬಿದ್ದು ಕೊಲೆಗೆ ಯತ್ನಿಸಿದರು... ಈ ವೇಳೆ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ...

  • ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ...

  • ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ ಸುಭದ್ರ ಸರ್ಕಾರದ ಭರವಸೆ ಮೂಡಿಸಿದ್ದು, ಜೆಡಿಎಸ್‌ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

ಹೊಸ ಸೇರ್ಪಡೆ