ಕರ್ತವ್ಯಕ್ಕೆ ಮರಳಿದ ಸಚಿವ ಸುಧಾಕರ್: ಖಾಸಗಿ ಮೆಡಿಕಲ್ ಕಾಲೇಜುಗಳ ಜೊತೆ ಚರ್ಚೆ
Team Udayavani, Jun 30, 2020, 4:07 PM IST
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಕ್ವಾರಂಟೈನ್ ಮುಗಿಸಿ ಇಂದು ಕರ್ತವ್ಯಕ್ಕೆ ಹಾಜರಾದರು. ಇಂದು ಬೆಂಗಳೂರು ನಗರದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆಗೆ ಚರ್ಚೆ ನಡೆಸಿದರು.
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಬೆಂಗಳೂರು ನಗರದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳು ಸಮ್ಮತಿಸಿವೆ.
ತಕ್ಷಣವೇ ಎರಡು ಸಾವಿರದಷ್ಟು ಹಾಸಿಗೆಗಳನ್ನು ನೀಡಲಿದ್ದು, ಒಂದು ವಾರದಲ್ಲಿ ಇದನ್ನು ನಾಲ್ಕೂವರೆ ಸಾವಿರಕ್ಕೆ ಹೆಚ್ಚಿಸುವುದಾಗಿ ಆಡಳಿತ ಮಂಡಳಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಆಡಳಿತ ಮಂಡಳಿಗಳು ಸರ್ಕಾರದ ನಿರ್ಧಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದವು.
ನಗರದಲ್ಲಿ ಒಟ್ಟು 11 ಖಾಸಗಿ ಮತ್ತು 3 ಸರ್ಕಾರಿ ಮೆಡಿಕಲ್ ಕಾಲೇಜ್ ಗಳಿವೆ. ಇವುಗಳಿಂದ ಕೋವಿಡ್ ಚಿಕಿತ್ಸೆಗಾಗಿ ಆರು ಸಾವಿರ ಹಾಸಿಗೆಗಳು ಲಭ್ಯವಾಗಲಿವೆ ಎಂದು ಸಭೆಯ ಬಳಿಕ ಸಚಿವ ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದರು.
ಒಂದು ವಾರದಲ್ಲಿ ಈಗ ತಿಳಿಸಿರುವ ಹಾಸಿಗೆ, ವೈದ್ಯರು ಮತ್ತು ಸಿಬ್ಬಂದಿ ಸೌಲಭ್ಯಗಳನ್ನು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ನೀಡಲಿವೆ. ಅದನ್ನು ಬಿಬಿಎಂಪಿಯ ಕೇಂದ್ರೀಕೃತ ವ್ಯವಸ್ಥೆ ಮೂಲಕ ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಂಚಿಕೆ ಮಾಡಲಾಗುವುದು ಎಂದರು.
ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಸರ್ಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವಿಮೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಪ್ರಕಟಿಸಿದರು.
ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಸಗಿ ಕಾಲೇಜು ಪಿಜಿ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿಯನ್ನು ಕೂಡ ಬಳಸಿಕೊಳ್ಳಲಾಗುವುದು. ಇನ್ನು ಮುಂದೆ ಚಿಕಿತ್ಸೆ ವಿಧಿ – ವಿಧಾನಗಳಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಜೆ ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕೋವಿಡ್ ಸೋಂಕು ತಗುಲಿದವರ ಪೈಕಿ ರೋಗ ಲಕ್ಷಣಗಳು ಇದ್ದವರು, 60 ಕ್ಕೂ ಹೆಚ್ಚು ವಯಸ್ಸಿನ ಮತ್ತು ಡಯಾಬಿಟಿಸ್, ಬ್ಲಡ್ ಪ್ರೆಷರ್, ಕಿಡ್ನಿ, ಲಂಗ್ಸ್ ಗಳಂತಹ ಗಂಭೀರ ಕಾಯಿಲೆ ಇದ್ದವರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ರೋಗಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇಟ್ಟು ನಿಗಾವಹಿಸಲಾಗುವುದು ಎಂದರು.
ಈ ಎಲ್ಲಾ ಮಾಹಿತಿ ಇರುವ ಚಿಕಿತ್ಸಾ ವಿಧಾನದ ವಿಧಿ – ವಿಧಾನಗಳ ಮಾರ್ಗಸೂಚಿ ಯನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದರು.
ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಮೋತ್ತೇಜನ ಔಷಧಕ್ಕಾಗಿ ಅಕ್ರಮ ಸಾಗಾಟ: 295 ಆಮೆಗಳ ಸಹಿತ ಓರ್ವನ ಬಂಧನ
ರಾಜ್ಯದಲ್ಲಿಂದು 1,837 ಕೋವಿಡ್ ಸೋಂಕು: ನಾಲ್ವರು ಸಾವು
ಗಲ್ಲು ಶಿಕ್ಷೆಯೇ ರೇಪ್ ಸಂತ್ರಸ್ತರ ಕೊಲೆಗೆ ಕಾರಣ: ರಾಜಸ್ಥಾನ ಸಿಎಂ ಹೊಸ ವಿವಾದ!
ಕೇಂದ್ರ ಸಂವಿಧಾನದ ಒಕ್ಕೂಟ ರಚನೆಗೆ ವಿರುದ್ಧವಾಗಿ ಹೋಗಬಾರದು: ಕೇರಳ ಸಿಎಂ
ಪ್ರಿಯಕರನನ್ನು ತೊರೆಯಲು ಒಲ್ಲದ ಮಗಳನ್ನು ಕೊಲ್ಲಲು ಲಕ್ಷ ರೂ. ಸುಪಾರಿ!