ಮೈಟ್‌: ವಿವಿಧ ಕೋರ್ಸ್‌ಗಳಿಗೆ ಎನ್‌ಬಿಎ ಮಾನ್ಯತೆ

Team Udayavani, Jun 26, 2019, 3:05 AM IST

ಮಂಗಳೂರು: ಮೂಡುಬಿದರೆ ಸಮೀಪ ಬಡಗಮಿಜಾರಿನಲ್ಲಿರುವ ಮಂಗಳೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನ (ಮೈಟ್‌) ವಿವಿಧ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಎನ್‌ಬಿಎ ಮಾನ್ಯತೆ ದೊರಕಿದೆ.

ಏರೋನಾಟಿಕಲ್‌ ಎಂಜಿನಿಯರಿಂಗ್‌, ಸಿವಿಲ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಹಾಗೂ ಎಂಜಿನಿಯರಿಂಗ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಉತ್ತಮ ಗುಣಮಟ್ಟದ ಪ್ರಕ್ರಿಯೆಯಾಗಿ ಈ ಮಾನ್ಯತೆ ಲಭ್ಯವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಒದಗಿಸುವಲ್ಲಿ ನೆರವಾಗಲಿದೆ. ಮೈಟ್‌ ಕಾಲೇಜು ನ್ಯಾಕ್‌ ಮಾನ್ಯತೆಯನ್ನೂ ಪಡೆದಿದೆ.

ಉದ್ಯಮ ಸಂಬಂಧಿತ ಗುಣಮಟ್ಟ ಪ್ರಾಯೋಗಿಕ ಆಧಾರಿತ ಶಿಕ್ಷಣ, ಪ್ರತಿ ವರ್ಷ ಉತ್ತಮ ಶೈಕ್ಷಣಿಕ ಫಲಿತಾಂಶ, ಉದ್ಯಮ ಶೈಕ್ಷಣಿಕ ಸಹಯೋಗ, ಸಂಶೋಧನೆ ಕೇಂದ್ರೀಕೃತ ಚಟುವಟಿಕೆಗಳು, ಉದ್ಯಮಶೀಲತೆ ವೃದ್ಧಿ, ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಕಂಪನಿಗಳಲ್ಲಿ ಉದ್ಯೋಗ ಒದಗಿಸುವುದು ಹಾಗೂ ಸರ್ವತೋಮುಖ ಅಭಿವೃದ್ಧಿ ಮುಂತಾದ ಸೂಚ್ಯಂಕಗಳ ಆಧಾರದಲ್ಲಿ ಈ ಮಾನ್ಯತೆ ನೀಡಲಾಗಿದೆ.

ಮೈಟ್‌ ಹಲವಾರು ಉನ್ನತ ಜಾಗತಿಕ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಉದ್ಯಮ ಆಧಾರಿತ ಕೌಶಲಗಳನ್ನು ಒದಗಿಸಲು ಕಾಲೇಜಿನಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ರಚಿಸಿದೆ. ಮೆಕ್ಯಾನಿಕಲ್‌, ಮೆಕಾಟ್ರಾನಿಕ್ಸ್‌, ಏರೋನಾಟಿಕಲ್‌ ಎಂಜಿನಿಯರಿಂಗ್‌ನ ವಿದ್ಯಾರ್ಥಿಗಳಿಗೆ ಮೈಟ್‌ ಸೀಮೆನ್ಸ್‌ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಇನ್‌ ಡಿಜಿಟಲ್‌ ಡಿಸೈನ್‌, ವ್ಯಾಲಿಡೇಶನ್‌ ಮತ್ತು ಡಿಜಿಟಲ್‌ ಮ್ಯಾನುಫ್ಯಾಕ್ಚರಿಂಗ್‌ನಲ್ಲಿ ಉದ್ಯಮ ಆಧಾರಿತ ತರಬೇತಿ ದೊರಕುತ್ತದೆ.

79 ಮಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಸೀಮೆನ್ಸ್‌ ಸಿಒಇ ಹೊಂದಿರುವ ಕರ್ನಾಟಕದ ಏಕೈಕ ಕಾಲೇಜು ಮೈಟ್‌ ಆಗಿದ್ದು, ಈ ಉತೃಷ್ಟ ಶ್ರೇಷ್ಠತಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ವಿವಿಧ ಕೈಗಾರಿಕಾ ಡಿಜಿಟಲ್‌ ತಂತ್ರಾಂಶಗಳಲ್ಲಿ ತರಬೇತಿ ಪಡೆದು, ಜಾಗತಿಕ ಶ್ರೇಷ್ಠ ಕಂಪೆನಿಗಳಲ್ಲಿ ಉತ್ತಮ ವೃತ್ತಿಜೀವನವನ್ನು ಪಡೆಯಲು ಸಹಾಯವಾಗುತ್ತದೆ.

ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಮೈಟ್‌ನಲ್ಲಿರುವ “ಬಾಷ್‌ ರೆಕ್ಸ್‌ರೋತ್‌ ಸೆಂಟರ್‌ ಆಫ್‌ ಕಾಂಪಿಟೆನ್ಸ್‌ ಇನ್‌ ಆಟೊಮೇಷನ್‌ ಟೆಕ್ನಾಲಜಿಯಲ್ಲಿ’ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರಾಲಿಕ್ಸ್‌, ನ್ಯೂಮ್ಯಾಟಿಕ್ಸ್‌, ಮೆಕಾಟ್ರಾನಿಕ್ಸ್‌, ಪಿಎಲ್ಸಿಯ ವಿವಿಧ ಕ್ಷೇತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಮೈಟ್‌ ಕಾರ್ಲ್ ಜ್ಯಸ್‌ ಕಂಪನಿಯೊಂದಿಗೆ ಸಹಯೋಗದ ಸಹಭಾಗಿತ್ವ ಹೊಂದಿದೆ. ಈ ಸಹಯೋಗದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೈಗಾರಿಕಾ ಮಾಪನಶಾಸ್ತ್ರದ ತರಬೇತಿ ನೀಡಲಾಗುತ್ತದೆ.

ಅಮೆರಿಕದ ನ್ಯೂಯಾರ್ಕ್‌ನ ಬಿಂಗ್‌ಹ್ಯಾಮನ್‌ ವಿವಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿವಿಗಳ ಜತೆ ಮೈಟ್‌ ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಯ ಅಡಿಯಲ್ಲಿ ಒದಗಿಸಲಾಗುವ ಅನೇಕ ಕಾರ್ಯಕ್ರಮಗಳಲ್ಲಿ ಪ್ರಮುಖವಾದದ್ದು “ಲೀನ್‌ ಸಿಕ್ಸ್‌ ಸಿಗ್ಮಾ – ಗ್ರೀನ್‌ ಬೆಲ್ಟ್ ಮತ್ತು ಯೆಲ್ಲೊ ಬೆಲ್ಟ್’ ಪ್ರಮಾಣೀಕರಣ ಕಾರ್ಯಕ್ರಮವಾಗಿದೆ. ಎಂಜಿನಿಯರಿಂಗ್‌ ಶಿಕ್ಷಣದ ಸಮಯದಲ್ಲಿಯೇ ಮೈಟ್‌ ಈ ಪ್ರಮಾಣೀಕರಣವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು, ಈ ಪ್ರಮಾಣೀಕರಣವನ್ನು ಒದಗಿಸುವ ಏಕೈಕ ಕಾಲೇಜು ಆಗಿದೆ.

ಮೆಕ್ಯಾನಿಕಲ್‌ ಸೇರಿದಂತೆ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಸೇರಿ ತಯಾರಿಸಿರುವ “ಮೈಟ್‌ ಹೈಬ್ರಿಡ್‌ ಕಾರಿಗೆ 2019ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸವೊತ್ತಮ ಚಾಂಪಿಯನ್‌ಶಿಪ್‌ ಪ್ರಶಸ್ತಿ ಲಭಿಸಿತ್ತು. ಅಲ್ಲದೆ ವಿದ್ಯಾರ್ಥಿಗಳು ತಯಾರಿಸಿರುವ ಇತರೆ ಕಾರುಗಳಾದ ಆಲ್‌ಟೆರ್ರ ಇನ್‌ ವೆಹಿಕಲ್‌, ಫಾರ್ಮುಲಾ ಕಾರು, ಗೋ-ಕಾರ್ಟ್‌, ಸೋಲಾರ್‌ ಚಾಲಿತ ಕಾರು, ಇಕೋ ಕಾರ್ಟ್‌ ಕಾರುಗಳು ದೇಶಾದ್ಯಂತ ನಡೆದ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಗೆದ್ದಿದೆ. ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳ ಅಂತಿಮ ವರ್ಷದ ಪ್ರಾಜೆಕ್ಟ್ಗೆ 2018ರ ರಾಜ್ಯಮಟ್ಟದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ಲಭಿಸಿದೆ.

ಮೈಟ್‌ ಪ್ರಸ್ತುತ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಇನ್ಫಾರ್ಮೆಶನ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಏರೋನಾಟಿಕಲ್‌ ಎಂಜಿನಿಯರಿಂಗ್‌, ಸಿವಿಲ್‌ ಎಂಜಿನಿಯರಿಂಗ್‌ ಮತ್ತು ಮೆಕಾಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಅಲ್ಲದೆ ಎಂಬಿಎ ಮತ್ತು ಎರಡು ಎಂಟೆಕ್‌ ವಿಭಾಗಗಳನ್ನೂ ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ