DK Shivakumar ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕ: ಸ್ಪೀಕರ್ ಎಚ್ಚರಿಕೆ
Team Udayavani, May 22, 2023, 2:17 PM IST
ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಿದ್ದು, ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿದರು. ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದ ಶಾಸಕರಾಗಿ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿ ಎಲ್ಲರ ಅಚ್ಚರಿಗೆ ಕಾರಣವಾದರು. ಇದಕ್ಕೆ ಸದನದಲ್ಲೇ ಆಕ್ಷೇಪ ಎದುರಾಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ಮಾಡದಂತೆ ಸೂಚಿಸಿದರು.
ಅಲ್ಲದೆ ದೇವರು ಅಥವಾ ಸಂವಿಧಾನದ ಹೆಸರಿನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿಸಬೇಕು, ಬೇರೆ ಯಾವುದೇ ಹೆಸರಿನಲ್ಲಿ ಬೇಡ ಎಂದು ಸೂಚನೆ ನೀಡಿದರು.
ಇದನ್ನೂ ಓದಿ:ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಆರ್.ವಿ.ದೇಶಪಾಂಡೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಮತದಾರರು ಹಾಗೂ ತಮ್ಮ ಮನೆ ದೇವರಾದ ಸತ್ಯಸಾರಮಣಿ ಮತ್ತು ಸತ್ಯಪದನಾದಿ ಅಮ್ಮ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ, ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ, ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.