ಮೋದಿ ಹೊಗಳಿದ ವಿಶ್ವನಾಥ್
Team Udayavani, May 31, 2019, 3:01 AM IST
ಬೆಂಗಳೂರು: ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಹೊಗಳಿದ್ದು, ಮೋದಿಯವರು ದೇಶದ ಭವಿಷ್ಯದ ಬಲಭೀಮನಾಗಲಿ ಎಂದು ಆಶಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನು ಒಪ್ಪಿ ಅಪ್ಪಿ ಆಡಳಿತ ನಡೆಸುತ್ತಿರುವ, 71 ವರ್ಷಗಳಿಂದಲೂ ಸ್ವಾತಂತ್ರವನ್ನು ಸಂರಕ್ಷಿಸಿ ಮುನ್ನುಗ್ಗುತ್ತಿರುವ, ಭಾರತದ ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಭಾರತದ ಸಮಸ್ತ ಜನಕೋಟಿಯ ಶುಭ ಕಾಮನೆಗಳು ಎಂದು ಹೇಳಿದ್ದಾರೆ.
ಭಾರತದ ಎಲ್ಲ ಜಾತಿ ಜನಾಂಗ, ಧರ್ಮ, ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿ ಹೆಜ್ಜೆ ಹಾಕಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.