ಚಂದ್ರಯಾನ-2ಕ್ಕೆ ಮುಹೂರ್ತ ಫಿಕ್ಸ್‌

Team Udayavani, Jun 13, 2019, 3:09 AM IST

ಬೆಂಗಳೂರು: ಬಹುನಿರೀಕ್ಷಿತ “ಚಂದ್ರಯಾನ-2’ಕ್ಕೆ ಇಸ್ರೋ ದಿನಾಂಕ ನಿಗದಿಪಡಿಸಿದ್ದು, ಜುಲೈ 15ರ ನಸುಕಿನ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ ಪರಿಕರಗಳನ್ನು ಹೊತ್ತೂಯ್ಯುವ “ಜಿಎಸ್‌ಎಲ್‌ವಿ ಮಾರ್ಕ್‌-3′ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಕುರಿತು ಇಸ್ರೋ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ಕೆ.ಶಿವನ್‌, ಭಾರತೀಯರ ಬಹುದಿನಗಳ ಕನಸಾಗಿರುವ ಚಂದ್ರಯಾನ -2ಕ್ಕೆ ಇಸ್ರೋ ಸಿದ್ಧವಾಗಿದೆ ಎಂದರು.

ಜಿಎಸ್‌ಎಲ್‌ವಿ ಮಾರ್ಕ್‌-3 ಹೆಸರಿನ ಬಾಹ್ಯಾಕಾಶ ನೌಕೆ (ರಾಕೆಟ್‌) “ಚಂದ್ರಯಾನ-2’ಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪರಿಕರಗಳನ್ನು ಹೊತ್ತು, ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ಕ್ಕೆ ಉಡಾವಣೆಗೊಳ್ಳಲಿದೆ. ಆಗಸ್ಟ್‌ 1 ರಂದು ಚಂದ್ರನ ಕಕ್ಷೆ ತಲುಪಿ ಸೆಪ್ಟೆಂಬರ್‌ 6ಕ್ಕೆ ಚಂದ್ರನ ಮೇಲ್ಮೈ ತಲುಪಲಿದೆ.

ಈ ಬಾಹ್ಯಾಕಾಶ ನೌಕೆ ಒಟ್ಟು 3.8 ಟನ್‌ ತೂಕವಿದ್ದು, ವಿಕ್ರಂ ಹೆಸರಿನ ಲ್ಯಾಂಡರ್‌ (ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ), ಪ್ರಗ್ಯಾನ್‌ ಹೆಸರಿನ ರೋವರ್‌ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ಸಾಧನ) ಹಾಗೂ ಆರ್ಬಿಟ್‌ (ಚಂದ್ರನ ಕಕ್ಷೆ ಸುತ್ತುವ ಸಾಧನ) ಎಂಬ ಮೂರು ಪರಿಕರಗಳನ್ನು ಚಂದ್ರನಲ್ಲಿಗೆ ಹೊತ್ತೂಯುತ್ತಿದೆ ಎಂದು ತಿಳಿಸಿದರು.

ಚಂದ್ರನಲ್ಲಿ ಕಾರ್ಯಾಚರಣೆ ಹೇಗೆ?: 2008ರ ಚಂದ್ರಯಾನ-1 ಮಾದರಿಯ ಕಾರ್ಯತಂತ್ರವನ್ನೇ ಈ ಬಾರಿಯೂ ಅನುಸರಿಸಲಾಗುತ್ತಿದೆ. ಜತೆಗೆ, ಚಂದ್ರನ ಅಂಗಳದಲ್ಲಿ ಸುಗಮವಾಗಿ ಇಳಿಯುವ ಸವಾಲಿನ ಕಾರ್ಯಕ್ಕಾಗಿ ಈ ಬಾರಿ ನೂತನ ತಂತ್ರಜ್ಞಾನವನ್ನು ಬಳಸಲಾಗಿದೆ.

ಸೆ.6ರಂದು ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ತಲುಪಲಿದೆ. ಈ ವೇಳೆ, ಚಂದ್ರನ ಕಕ್ಷೆಯಲ್ಲಿ 100 ಕಿ.ಮೀ.ಅಂತರದಲ್ಲಿ ಸುತ್ತಾಟ ನಡೆಸುತ್ತದೆ. ಇನ್ನೊಂದೆಡೆ, ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಸುರಕ್ಷಿತವಾಗಿ ಪರಿಕರಗಳನ್ನು ಇಳಿಸುತ್ತದೆ. ಮೊದಲು ಲ್ಯಾಂಡರ್‌ ಬಾಗಿಲು ತೆರದು ರೋವರ್‌ ಹೊರ ಬರಲಿದ್ದು, ಕ್ರಮೇಣ ಚಂದ್ರನ ನೆಲದ ಮೇಲೆ ಚಲಿಸಲಾರಂಭಿಸುತ್ತದೆ.

ಈ ರೋವರ್‌ ಪ್ರತಿ ಸೆಕೆಂಡಿಗೆ 1 ಸೆಂ.ಮೀ.ನಷ್ಟು ವೇಗದಲ್ಲಿ ಚಲಿಸಲಿದ್ದು, ಒಟ್ಟು ಚಂದ್ರನ 500 ಮೀ.ದೂರದ ಮೇಲ್ಮೈನಲ್ಲಿ ವಿವಿಧ ಪ್ರಯೋಗಗಳನ್ನು ನಡೆಸಲಿದೆ. ಮಾಹಿತಿಯನ್ನು ಲ್ಯಾಂಡರ್‌ ಮೂಲಕ ಕಕ್ಷೆ ಸುತ್ತುತ್ತಿರುವ ಆರ್ಬಿಟ್‌ಗೆ ತಲುಪಿಸುತ್ತದೆ. ನಂತರ ಆರ್ಬಿಟ್‌ ಇಸ್ರೋಗೆ ಮಾಹಿತಿ ವರ್ಗಾಹಿಸುತ್ತದೆ.

ಒಟ್ಟು 1 ಚಂದ್ರಮಾನ ದಿನ (14 ಭೂಮಿ ದಿನಗಳ) ಕಾರ್ಯಾಚರಣೆ ಇದಾಗಿದ್ದು, ಸೆ.6 ರಿಂದ 20ರವರೆಗೆ ನಡೆಯಲಿದೆ. ವಿಶೇಷವಾಗಿ ಆರ್ಬಿಟ್‌ (ಕಕ್ಷೆಗಾಮಿ)ನಲ್ಲಿ ಅಳವಡಿಸಲಾದ ಸಂಚಲನಾ ವ್ಯವಸ್ಥೆ (ಪ್ರೊಪಲ್ಷನ್‌ ಸಿಸ್ಟಂ) ಬಳಸಿ ಆರ್ಬಿಟ್‌ನ ಕಕ್ಷೆ ಎತ್ತರಿಸುವ ಮತ್ತು ಪಥ ಬದಲಿಸುವ ಕಾರ್ಯಾಚರಣೆ ಮಾಡಲಾಗುವುದು. ಪ್ರಮುಖವಾಗಿ ವಿಕ್ರಂ ಲ್ಯಾಂಡರ್‌ನ್ನು ಚಂದ್ರನ ನೆಲದ ಮೇಲೆ ಇಳಿಸುವ ಕೆಲಸ ಸವಾಲಿನದಾಗಿದ್ದು, ಇಸ್ರೋದ ಇತಿಹಾಸದಲ್ಲೇ ಇದು ಕ್ಲಿಷ್ಟಕರ ಕಾರ್ಯಾಚರಣೆ.

ಚಂದ್ರಯಾನದ ಮುಖ್ಯ ಉದ್ದೇಶ: ಚಂದ್ರನ ಮೇಲ್ಮೈನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತದ ನೌಕೆಯೊಂದನ್ನು ಸುರಕ್ಷಿತವಾಗಿ ಇಳಿಸಿ, ಅಧ್ಯಯನ ನಡೆಸುವುದು. ಪ್ರಮುಖ ಖನಿಜ ಅಂಶಗಳ (ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಕಬ್ಬಿಣ ಇತ್ಯಾದಿ) ಕುರಿತು ಅಧ್ಯಯನ ನಡೆಸುವುದು. ಜತೆಗೆ, ಚಂದ್ರನ ಮೇಲೆ ನೀರಿನ ಅಸ್ತಿತ್ವವನ್ನು ಮತ್ತಷ್ಟು ಕೂಲಂಕಷವಾಗಿ ಅಧ್ಯಯನ ನಡೆಸಿ, ಖಚಿತ ಪಡೆಸಿಕೊಳ್ಳುವುದು.

ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಲಿರುವ ಮೊದಲ ಬಾಹ್ಯಾಕಾಶ ನೌಕೆ: ಇದೇ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಸಿ ಎಲ್ಲಾ ಕಾರ್ಯಾಚರಣೆಗಳನ್ನು ಅಲ್ಲಿಯೇ ನಡೆಸಲು ಇಸ್ರೋ ಉದ್ದೇಶಿಸಿದೆ. ಈವರೆಗೆ ಯಾವ ಬಾಹ್ಯಾಕಾಶ ಸಂಸ್ಥೆಗಳೂ ಈ ಸ್ಥಳದಲ್ಲಿ ತಮ್ಮ ನೌಕೆಯನ್ನು ಇಳಿಸುವ ಪ್ರಯತ್ನ ಮಾಡಿಯೇ ಇಲ್ಲ. ಈ ಹೊಸ ಸಾಹಸದ ಮೂಲಕ ಇಸ್ರೋ ಶಕ್ತಿ ಇನ್ನಷ್ಟು ಹೆಚ್ಚಲಿದೆ.

ಜೂನ್‌ 20ಕ್ಕೆ ಶ್ರೀ ಹರಿಕೋಟಾಗೆ ವರ್ಗಾವಣೆ: ಚಂದ್ರಯಾನ-2ರ ಬಾಹ್ಯಾಕಾಶ ನೌಕೆಯ ಪರಿಕರಗಳನ್ನು ಬೆಂಗಳೂರಿನಲ್ಲಿರುವ ಮಾರತ್‌ಹಳ್ಳಿಯಲ್ಲಿರುವ ಐಎಸ್‌ಐಟಿಇ (ಸ್ಯಾಟಲೈಟ್‌ ಸೆಂಟರ್‌)ನಲ್ಲಿ ತಯಾರಿಸುತ್ತಿದ್ದು, ಅಂತಿಮ ಕೆಲಸ ಪೂರ್ಣಗೊಂಡ ಬಳಿಕ ಅಂದಾಜು ಜೂನ್‌ 20ರ ನಂತರ ಅದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ರವಾನಿಸಲಾಗುವುದು.

14 ಪೇಲೋಡ್ಸ್‌ ಗಳ ಬಳಕೆ: ಈ ಚಂದ್ರಯಾನದ ಬಾಹ್ಯಾಕಾಶ ನೌಕೆಯಲ್ಲಿ 14 ಪೇಲೋಡ್ಸ್‌ (ವೈಜ್ಞಾನಿಕ ಉಪಕರಣಗಳು)ಗಳಿದ್ದು, ಆ ಪೈಕಿ 13 ಭಾರತೀಯ ಮೂಲದವೇ ಆಗಿವೆ. ಎಂಟು ಆರ್ಬಿಟ್‌ (ಕಕ್ಷಾನೌಕೆ), ಮೂರು ಲ್ಯಾಂಡರ್‌, ಎರಡು ರೋವರ್‌ ಇರುತ್ತದೆ. ಒಂದು ಅಮೆರಿಕ ಮೂಲದ ಪೇಲೋಡ್‌ ಇದ್ದು, ಲೇಸರ್‌ ಕಿರಣದ ಮೂಲಕ ಭೂಮಿಯ ದೂರವನ್ನು ನಿಖರವಾಗಿ ಗುರುತಿಸಲು ಇದನ್ನು ಅಳವಡಿಸಲಾಗಿದೆ.

* ಒಟ್ಟು ದೂರ – 3 ಲಕ್ಷ 84 ಕಿ.ಮೀ.
* ಚಂದ್ರಯಾನ-2ರ ಒಟ್ಟು ವೆಚ್ಚ – 603 ಕೋಟಿ ರೂ.
* ಒಟ್ಟು ಕಾರ್ಯಾಚರಣೆ ಅವಧಿ – 14 ದಿನಗಳು (ಒಂದು ಚಂದ್ರಮಾನ ದಿನ)
* ಆರ್ಬಿಟ್‌ (ಕಕ್ಷೆ) ಆಯಸ್ಸು 1 ವರ್ಷ
* ಬಾಹ್ಯಾಕಾಶ ನೌಕೆಯ ವೆಚ್ಚ 375 ಕೋಟಿ ರೂ.
* ಚಂದ್ರಯಾನ ಪರಿಕರ ಸಿದ್ಧತೆಗೆ ಕೈಜೋಡಿಸಿದ ಕಾರ್ಖಾನೆಗಳು, ಅಧ್ಯಯನ ಸಂಸ್ಥೆಗಳ ಸಂಖ್ಯೆ 500ಕ್ಕೂ ಹೆಚ್ಚು.
* ಚಂದ್ರಯಾನದ ಒಟ್ಟಾರೆ ವೆಚ್ಚದಲ್ಲಿ ಶೇ.60ರಷ್ಟು ಹಾಗೂ ಜಿಎಸ್‌ಎಲ್‌ವಿ ಮಾರ್ಕ್‌-3 ಬಾಹ್ಯಾಕಾಶ ನೌಕೆ ತಯಾರಿ ವೆಚ್ಚದಲ್ಲಿ ಶೇ.80ನ್ನು ಕಾರ್ಖಾನೆಗಳೇ ಬರಿಸಿವೆ.
* ಇಸ್ರೋದ ಶೇ.30ರಷ್ಟು ಸಿಬ್ಬಂದಿ, ಈ ಚಂದ್ರಯಾನ -2ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ