ಮಹಾನಗರದ ಪಾರ್ಕಿಂಗ್ ತಾಣಗಳೆಷ್ಟು ಸುರಕ್ಷಿತ ?


Team Udayavani, Mar 4, 2019, 5:34 AM IST

fire.jpg

2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ್ದು ರಾಜ್ಯದ ಅತಿ ದೊಡ್ಡ ವಾಹನ ಅಗ್ನಿ ದುರಂತ. ಅದರ ಬೆನ್ನಲ್ಲೇ ಹೆಚ್ಚು ವಾಹನಗಳಿರುವ ಬೆಂಗಳೂರಿನ ಪಾರ್ಕಿಂಗ್‌ ತಾಣಗಳು ಎಷ್ಟು ಸುರಕ್ಷಿತವಾಗಿವೆ? ಅಲ್ಲಿ ವಾಹನ ನಿಲ್ಲಿಸುವುದು ಸೇಫಾ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನಿಯಮಗಳು ಪಾಲನೆಯಾಗಿವೆಯೇ? ಎಂಬ ಹಲವು ಪ್ರಶ್ನೆಗಳೊಂದಿಗೆ ನಗರದಲ್ಲಿರುವ ಸರ್ಕಾರಿ ನಿಲುಗಡೆ ತಾಣಗಳ ಸ್ಥಿತಿಗತಿಯ ಮಾಹಿತಿ ಈ ಬಾರಿಯ ಸುದ್ದಿ-ಸುತ್ತಾಟದಲ್ಲಿ.

ಕೇವಲ ಎರಡು ದಿನಗಳ ಅಂತರದಲ್ಲಿ ಎರಡು ಮಹಾನಗರಗಳಲ್ಲಿ ನೂರಾರು ವಾಹನಗಳು ಬೆಂಕಿಗಾಹುತಿ ಆಗಿವೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏರೋ ಇಂಡಿಯಾ ಸಂದರ್ಭದಲ್ಲಿ ಫೆ.23ರಂದು ನಗರದಲ್ಲಿ 300ಕ್ಕೂ ಅಧಿಕ ವಾಹನಗಳು ಸುಟ್ಟು ಕರಕಲಾದವು. ಮರುದಿನ, ಫೆ. 24ರಂದು ಚೆನ್ನೈ ಬಳಿ ಪೊರೂರು ಎಂಬಲ್ಲಿ ಸುಮಾರು 150 ವಾಹನಗಳು ಹೊತ್ತಿ ಉರಿದಿವೆ. ಮೇಲ್ನೋಟಕ್ಕೆ ಆಕಸ್ಮಿಕವೆನಿಸಿದರೂ ಎರಡೇ ದಿನಗಳ ಅಂತರದಲ್ಲಿ ಅತಿ ದೊಡ್ಡ ಎರಡು ವಾಹನ ಬೆಂಕಿ ದುರಂತಗಳು ಸಂಭವಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಆಕಸ್ಮಿಕವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಕಾರಿನ ಸೈಲೆನ್ಸರ್‌ನಿಂದ ಅಗ್ನಿ ದುರಂತ
ಯಲಹಂಕ ವಾಯುನೆಲೆಯ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ ಕಾರೊಂದರ ಸೈಲೆನ್ಸರ್‌ ಬಿಸಿಯೇ ಭಾರೀ ಅಗ್ನಿ ಅವಗಡಕ್ಕೆ ಕಾರಣ ಎಂದು ಪೊಲೀಸ್‌ ತನಿಖೆಯಲ್ಲಿ ಬಹುತೇಕ ದೃಢಪಟ್ಟಿದೆ. ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿದ್ದು ಕಾರಿನ ಸೈಲೆನ್ಸರ್‌ ಬಿಸಿಯಿಂದ ಅದರ ಕೆಳಗಡೆಯಿದ್ದ ಹುಲ್ಲಿಗೆ ಬೆಂಕಿ ತಗುಲಿ, ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ. ಬಳಿಕ, ಉಳಿದ ಕಾರುಗಳಿಗೂ ಬೆಂಕಿ ವ್ಯಾಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಸಂಗ್ರಹಿಸಿರುವ ಮಣ್ಣು ಸೇರಿ ಇನ್ನಿತರೆ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬರಬೇಕಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಹೇಳಿಕೆ ನೀಡಿದ ಮಹಿಳೆ: ದುರಂತಕ್ಕೆ ಕಾರಣವಾದ ಕಾರಿಗೆ ಬೆಂಕಿ ಹತ್ತಿಕೊಂಡಿರುದನ್ನು ನೋಡಿರುವ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಸ್ವಯಂಪ್ರೇರಿತವಾಗಿ ಪೊಲೀಸರ ಮಂದೆ ಬಂದು ಹೇಳಿಕೆ ದಾಖಲಿಸಿದ್ದಾರೆ. ಏರ್‌ ಶೋ ನೋಡಲು ಕುಟುಂಬದ ಜತೆ ತೆರಳಿದ್ದ ಉಡುಪಿ ಮೂಲದ ಮಹಿಳೆ, ಘಟನೆ ನಡೆದ ಕೆಲ ದಿನಗಳ ನಂತರ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ವತಃ ಕರೆ ಮಾಡಿ ವಿಚಾರಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ. “ಇನೋವಾ ಕಾರಿನಲ್ಲಿ ಮಕ್ಕಳ ಜತೆ ಏರ್‌ಶೋ ನೋಡಲು ತೆರಳಿದ್ದೆ. ಕಾರು ಪಾರ್ಕಿಂಗ್‌ ಮಾಡಿ ಕೆಳಗಡೆ ಇಳಿದೆ. ಸಮೀಪದ ಕಾರಿನ ಕೆಳಗಡೆ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದೆ. ಇಬ್ಬರು ಯುವಕರು ಬೆಂಕಿ ಆರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಂಕಿಯ ತೀವ್ರತೆ ಹೆಚ್ಚಾಯಿತು. ಅವರಿಬ್ಬರೂ ಓಡಿಹೋದರು. ಮಕ್ಕಳು ಜತೆಗಿದ್ದಿದ್ದರಿಂದ ರಕ್ಷಣೆ ದೃಷ್ಟಿಯಿಂದ ಕಾರು ತೆಗೆದುಕೊಂಡು ಅಲ್ಲಿಂದ ತೆರಳಿಬಿಟ್ಟೆ. ಕೆಲವೇ ನಿಮಿಷಗಳಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತು. ನೂರಾರು ಕಾರುಗಳು ಬೆಂಕಿಗೆ ಆಹುತಿಯಾದವು’ ಎಂದು ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ವಿವರಿಸಿದರು. ಮಹಿಳೆ ಹೇಳಿಕೆ ಆಧರಿಸಿ ಬೆಂಕಿ ಆರಿಸಲು ಯತ್ನಿಸಿದ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದರೆ, ಇದುವರೆಗೂ ಗೊತ್ತಾಗಿಲ್ಲ ಎಂದು ಅಧಿಕಾರಿ ಹೇಳಿದರು.

ಯಾವ ವರ್ಷ ಎಷ್ಟು ಅಗ್ನಿ ಅವಘಡ?
ವರ್ಷ  ಘಟನೆಗಳು

2015   115
2016   152
2017   208
2018   214
2019   62 (ಫೆ.28ರ ಅಂತ್ಯಕ್ಕೆ)

15 ಲಕ್ಷ ವಾಹನಗಳಿಗೆ ಅನಾಹುತದ ಭೀತಿ
ಏರೋ ಇಂಡಿಯಾ ಅವಘಡ ಒಂದು ಸಣ್ಣ ಸ್ಯಾಂಪಲ್‌. ಆದರೆ, ನಗರದ ಸುಮಾರು 15 ಲಕ್ಷ ವಾಹನಗಳು ನಿತ್ಯ ಇದೇ ಅನಾಹುತದ ಭೀತಿಯಲ್ಲಿವೆ! ಹೇಗೆ ಅಂತೀರಾ, ನಗರದಲ್ಲಿ ಸುಮಾರು 72 ಲಕ್ಷ ವಾಹನಗಳಿದ್ದು, ಆ ಪೈಕಿ
ಶೇ.50ರಷ್ಟು ವಾಹನಗಳಿಗೆ ನಿಲುಗಡೆ ವ್ಯವಸ್ಥೆಯೇ ಇಲ್ಲ. ವೈಮಾನಿಕ ಪ್ರದರ್ಶನ, ವಿವಿಧ ಸಭೆ-ಸಮಾರಂಭ, ನಗರದ ಪ್ರಮುಖ ರಸ್ತೆಗಳು, ಬಸ್‌, ರೈಲು ಹಾಗೂ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಯಾವುದೇ ತುರ್ತಾಗಿ ಅಗ್ನಿ ನಂದಿಸುವ ಸೌಲಭ್ಯಗಳಿಲ್ಲ. ಮೂಲಗಳ ಪ್ರಕಾರ ನಿತ್ಯ ನಗರದಲ್ಲಿ 15 ಲಕ್ಷ ವಾಹನಗಳು ಅಪಾಯಕಾರಿ ಸ್ಥಳಗಳಲ್ಲಿ ನಿಲುಗಡೆಯಾಗುತ್ತಿವೆ, ಅಲ್ಲಿ ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾಗಳಾಗಲಿ, ಅಗ್ನಿ ನಂದಿಸುವ ಉಪಕರಣಗಳಾಗಲಿ ಇರುವುದಿಲ್ಲ. ಬೆಂಕಿ ಅನಾಹುತ ಸಂಭವಿಸಿದರೆ ವಾಹನಗಳು ಸುಟ್ಟು ಕರಕಲಾಗುವುದು ಅನಿವಾರ್ಯವಾಗಿದೆ. ಮಾಲ್‌, ಅಪಾರ್ಟ್‌ಮೆಂಟ್‌, ಬೃಹತ್‌ ಕಟ್ಟಡಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಜತೆಗೆ ಸ್ಥಳೀಯ ಸಂಸ್ಥೆಗಳಿಂದ ನಿರ್ಮಿಸಿರುವ ಪಾರ್ಕಿಂಗ್‌ ತಾಣಗಳಲ್ಲಿಯೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ, ನಿಯಮಿತವಾಗಿ ನಿರ್ವಹಣೆಯಾಗದ ಪರಿಣಾಮ ಅನಾಹುತಗಳು ಸಂಭವಿಸಿದಾಗ ಕ್ಷಿಪ್ರಗತಿಯಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಆಯೋಜಕರ ಅನುಮತಿ ಕಡ್ಡಾಯ
ರಾಜಧಾನಿಯ ಅರಮನೆ ಮೈದಾನ, ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ಸೇರಿದಂತೆ ಇತರ ವಿಶಾಲ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ರ್ಯಾಲಿ, ಮದುವೆ ಸೇರಿದಂತೆ ಸಂಘ ಸಂಸ್ಥೆಗಳ ಸಭೆ, ಭಾರೀ ಜನಸಮೂಹ ಸೇರುವ ಕಾರ್ಯಕ್ರಮಗಳು ನಡೆಯುತ್ತವೆ. ಈ ವೇಳೆ ಅಗ್ನಿ ದುರಂತಗಳು ಸಂಭವಿಸದಂತೆ ಕಾರ್ಯಕ್ರಮಗಳ ಆಯೋಜಕರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಜತೆಗೆ, ಅಗ್ನಿಶಾಮಕ ಇಲಾಖೆಯಿಂದಲೂ ಅನುಮತಿ ಪಡೆಯಬೇಕಾಗುತ್ತದೆ. ಒಂದು ವೇಳೆ ಅಗ್ನಿಶಾಮಕ ದಳದ ಸೇವೆ ಅಗತ್ಯವಿದ್ದರೆ ನಿಗದಿತ ಶುಲ್ಕ ಪಾವತಿಸಿದರೆ, ಅಗತ್ಯದಷ್ಟು ವಾಹನಗಳನ್ನು ನಿಯೋಜಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಅನಧಿಕೃತ ಪಾರ್ಕಿಂಗ್‌ ತಾಣಗಳೇ ಹೆಚ್ಚು
ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಲು ಕೆಲವೊಂದು ರಸ್ತೆಗಳಲ್ಲಿ ವಲಯ ಜಂಟಿ ಆಯುಕ್ತರು ಹಾಗೂ ಕಂದಾಯ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಹೀಗೆ ಅನುಮತಿ ಪಡೆದವರು ತಾವು ಪಾಲಿಕೆಯಿಂದ ಅನುಮತಿ ಪಡೆದಿರುವ ಮಾಹಿತಿಯನ್ನು ರಸ್ತೆಬದಿಯಲ್ಲಿ ಅಳವಡಿಸಬೇಕು. ಜತೆಗೆ ವಾಹನಗಳಿಗೆ ನಿಗದಿಪಡಿಸಿರುವ ಶುಲ್ಕದ ಮಾಹಿತಿಯನ್ನೂ ಪ್ರದರ್ಶಿಸಬೇಕು. ಆದರೆ, ನಗರದ ಬಹುತೇಕ ಭಾಗಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುತ್ತಿದ್ದು, ಪಾಲಿಕೆ ಅಧಿಕಾರಿಗಳನ್ನು ಪಾರ್ಕಿಂಗ್‌ ಮಾಯಾ ನಿಯಂತ್ರಿಸುತ್ತಿದೆ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಯೋಜನೆ ರೂಪಿಸಿದ್ದರೂ ಈವರೆಗೆ ಜಾರಿಯಾಗಿಲ್ಲ.

ಬಳಕೆಯಾಗುತ್ತಿಲ್ಲ ಪಾರ್ಕಿಂಗ್‌ ತಾಣಗಳು
ಪಾಲಿಕೆಯ ಒಡೆತನದಲ್ಲಿರುವ ಎರಡು ಹಾಗೂ ಬಿಎಂಟಿಸಿಯ 9 ಟಿಟಿಎಂಸಿಗಳಲ್ಲಿ ಏಕಕಾಲಕ್ಕೆ 1200 ಕಾರುಗಳು ಹಾಗೂ 3500 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿದೆ. ಆದರೆ, ನಿತ್ಯ ಶೇ.20ರಿಂದ ಶೇ.30ರಷ್ಟು ವಾಹನಗಳಷ್ಟೇ ಪಾರ್ಕಿಂಗ್‌ ತಾಣಗಳಲ್ಲಿ ನಿಲುಗಡೆಯಾಗುತ್ತಿದ್ದು, ಸಾರ್ವಜನಿಕರು ವಾಹನಗಳನ್ನು ರಸ್ತೆಬದಿಯಲ್ಲೇ ನಿಲ್ಲಿಸುತ್ತಾರೆ. ಕೆ.ಆರ್‌.ಮಾರುಕಟ್ಟೆಯ ನೆಲಮಹಡಿಯಲ್ಲಿ 70 ಕಾರು ಹಾಗೂ 300 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿ ದ್ದರೂ, ನಿತ್ಯ 25 ಕಾರು ಹಾಗೂ 150 ಬೈಕ್‌ಗಳಷ್ಟೇ ನಿಲ್ಲುತ್ತಿವೆ.

ಬರಲಿದೆ ಅತಿದೊಡ್ಡ ಪಾರ್ಕಿಂಗ್‌ ತಾಣ
ನಗರದ ಅತಿದೊಡ್ಡ ಪಾರ್ಕಿಂಗ್‌ ತಾಣವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಒಮ್ಮೆಗೆ 500 ಕಾರು ಹಾಗೂ 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಇದರೊಂದಿಗೆ ಕಿದ್ವಾಯಿ ಗಂಥಿ ಸ್ಮಾರಕ ಆಸ್ಪತ್ರೆಯಲ್ಲೂ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸುತ್ತಿದ್ದು, ಇನ್ನೂ ಕೆಲವೆಡೆ ನಿರ್ಮಿಸುವ ಯೋಜನೆಯಿದೆ ಎಂದು ಪಾಲಿಕೆಯ ಯೋಜನೆವಿಭಾಗ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಮಾಹಿತಿ ನೀಡಿದ್ದಾರೆ.

ಪಾರ್ಕಿಂಗ್‌ ಅನುಮತಿಗೆ ನಿಯಮಗಳೇನು?
ಬಹುಮಹಡಿ ವಾಹನ ನಿಲುಗಡೆ ಹಾಗೂ ರಸ್ತೆ ಬದಿ ವಾಹನ ನಿಲುಗಡೆ ವ್ಯವಸ್ಥೆಗಳು ನಗರದಲ್ಲಿ
ಅಸ್ತಿತ್ವದಲ್ಲಿವೆ. ಅದರಂತೆ ಬಹುಮಹಡಿ ತಾಣ ನಿರ್ಮಿಸಲು ಪಾಲಿಕೆ ಹಾಗೂ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಅಗ್ನಿ ಅವಗಢ ಸಂಭವಿಸಿದಾಗ ಶೀಘ್ರ ನಿಯಂತ್ರಿಸಲು ನೀರು ಸಿಂಪಡನಾ ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ. ಜತೆಗೆ ಅಗ್ನಿ ತಹಬದಿಗೆ ತರುವಂತಹ ರಾಸಾಯನಿಕ, ನೀರು ಹಾಗೂ ಮಣ್ಣಿನ ಬಕೆಟ್‌ಗಳನ್ನು ಇರಿಸಬೇಕು ಎಂಬ ನಿಯಮಗಳಿದ್ದು, ರಸ್ತೆಬದಿಯಲ್ಲಿಯೂ ಭಾರೀ ಪ್ರಮಾಣದಲ್ಲಿ ವಾಹನಗಳು ನಿಲುಗಡೆ ಮಾಡಿದರೆ ಅಂತಹ ಪ್ರದೇಶಗಳಲ್ಲಿ ಇಂತಹ ಉಪಕರಣಗಳನ್ನು ಕಡ್ಡಾಯವಾಗಿ ಇರಿಸಬೇಕು.

ಅಗ್ನಿಶಾಮಕ ಯಂತ್ರಕ್ಕಿಲ್ಲ ಪವೇಶ
ಶಾಪಿಂಗ್‌ ಮಾಲ್ ಅಥವಾ ಮತ್ತಿತರ ವಾಣಿಜ್ಯ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಎರಡು-ಮೂರು ಮಹಡಿಯ ನೆಲಮಾಳಿಗೆಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅವುಗಳ ಎತ್ತರ ತುಂಬಾ ಕಡಿಮೆ ಇರುತ್ತದೆ. ಅಂತಹ ಕಡೆ ಆಕಸ್ಮಿಕ ಬೆಂಕಿ ಬಿದ್ದರೆ, ಅಗ್ನಿಶಾಮಕ ವಾಹನ ಒಳಗೆ ಹೋಗಲು ಆಗುವುದೇ ಇಲ್ಲ. ಅಂತಹ ಕಟ್ಟಡಗಳಲ್ಲಿ ಅಗ್ನಿಶಮನ ವ್ಯವಸ್ಥೆ ಅಳವಡಿಸಿ ರುತ್ತಾರೆ ಅಂದುಕೊಳ್ಳೋಣ. ಅದಕ್ಕೆ ಮೇಲ್‌ ಛಾವಣಿಯಲ್ಲಿರುವ ಟ್ಯಾಂಕರ್‌ನಿಂದ ನೀರು ಪೂರೈಕೆ ಆಗಬೇಕು. ಆ ಸಂಪಿನಲ್ಲಿ ನೀರು ಇದೆಯೋ ಅಥವಾ ಇಲ್ಲವೋ ಎನ್ನುವುದು ನೋಡುವವರು ಯಾರು? ಸ್ವತಃ ಮಾಲೀಕರೇ ಇದನ್ನು ದೃಢಪಡಿಸಿದರೆ, ಅದು  ಎಷ್ಟರಮಟ್ಟಿಗೆ ನಿಜವಾಗಿರುತ್ತದೆ ಎಂದು ತಜ್ಞರೊಬ್ಬರು ಕೇಳಿದರು.

40 ಸಾವಿರ ಲೀಟರ್‌ ತೈಲವಿದ್ದ ಜಾಗದಲ್ಲಿರಲಿಲ್ಲ ಸುರಕ್ಷತೆ! 
ಏರೋ ಇಂಡಿಯಾ ಪ್ರದರ್ಶನದ ವೇಳೆ ಅಗ್ನಿ ದುರಂತ ಸಂಭವಿಸಿದ ಪಾರ್ಕಿಂಗ್‌ ತಾಣದಲ್ಲಿ ಸರಿಸುಮಾರು 40 ಸಾವಿರ ಲೀ. ಪೆಟ್ರೋಲ್ ಮತ್ತು ಡೀಸೆಲ್ ಇತ್ತು! ಹೇಗೆಂದರೆ, ಯಲಹಂಕ ವಾಯು ನೆಲೆಗೆ ಹೋಗಿ-ಬರಲು ಸರಾಸರಿ 40 ಕಿ.ಮೀ. ಆಗುತ್ತದೆ. ಕಾರು ಹೊಂದಿದವರು ಅದರಲ್ಲೂ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವ ವರ್ಗ ಕನಿಷ್ಠ 20 ಲೀ. ಪೆಟ್ರೋಲ್‌ ಅಥವಾ ಡೀಸೆಲ ತುಂಬಿಸಿರುತ್ತಾರೆ. ಘಟನೆ ನಡೆದ ಜಾಗದಲ್ಲಿ ಸುಮಾರು ಎರಡು ಸಾವಿರ ವಾಹನಗಳಿದ್ದವು. ಅವುಗಳಲ್ಲಿದ್ದ ಇಂಧನದ ಲೆಕ್ಕಹಾಕಿದರೆ, ಅದು 40 ಸಾವಿರ ಲೀ. ಆಗುತ್ತದೆ. ಇಷ್ಟೊಂದು ಇಂಧನ ಇರುವ ಜಾಗದಲ್ಲಿ ಕನಿಷ್ಠ ಒಂದೇ ಒಂದು ಅಗ್ನಿಶಾಮಕ ವಾಹನ ಇರಲಿಲ್ಲ. ಸಮರ್ಪಕ ಸಿಸಿ ಕ್ಯಾಮೆರಾಗಳು ಇರಲಿಲ್ಲ. ನಿತ್ಯ ಮುಂಚಿತವಾಗಿ ಒಂದೆರಡು ಗಾಡಿ ನೀರನ್ನು ನೆಲಕ್ಕೆ ಹಾಕಿದ್ದರೆ, ಒಣಗಿದ ಹುಲ್ಲು ಹಸಿ ಆಗುತ್ತಿತ್ತು. ಆಗ, ಬೆಂಕಿ ಪ್ರಮಾಣ ತಕ್ಕಮಟ್ಟಿಗೆ ತಗ್ಗಿಸಬಹುದಿತ್ತು. ಇದಾವ ಮುನ್ನೆಚ್ಚರಿಕೆ ಕ್ರಮಗಳೂ ಅಲ್ಲಿ ಇರಲಿಲ್ಲ ಎಂದು ಅಗ್ನಿಶಮನ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ವಾಹನಗಳಿಗೆ ಬೆಂಕಿಯೊಂದೇ ಕಂಟಕವಲ್ಲ!
ನಗರದಲ್ಲಿ ಬೆಂಕಿ ಅವಗಡಗಳಲ್ಲಿ ಮಾತ್ರವೇ ವಾಹನಗಳು ತೊಂದರೆಗೆ ಒಳಗಾಗಿಲ್ಲ. ಬದಲಿಗೆ ಹಲವಾರು ಬಡಾವಣೆಗಳಲ್ಲಿ ಮಳೆಯಿಂದಾಗಿ ಅಪಾರ್ಟ್‌ಮೆಂಟ್‌ಗಳ ತಳಮಹಡಿಗೆ ನೀರು ನುಗ್ಗಿ, ಕಾರುಗಳು ನೀರಲ್ಲಿ ತೇಲಿದ ಹಲವಾರು ಉದಾಹರಣೆಗಳಿವೆ. ಈ ಹಿಂದೆ ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿ ಬಡಾವಣೆಯಲ್ಲಿ ಪ್ರವಾಹ ಉಂಟಾದಾಗ ಬಹುತೇಕ ಅಪಾರ್ಟ್‌ಗಳಲ್ಲಿ ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದವು. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂಬ ನಿಯಮ ರೂಪಿಸಿದರೂ ಪ್ರಯೋಜನವಾಗಿಲ್ಲ.

ನೀರು ಬಳಕೆ ಮಾಡಬಾರದು
ಪೆಟ್ರೋಲ್‌-ಡೀಸೆಲ್‌ಗೆ ಸಂಬಂಧಿಸಿದ ಬೆಂಕಿ ಶಮನಕ್ಕೆ ನೀರು ಬಳಸಬಾರದು. ಏಕೆಂದರೆ, ಬೆಂಕಿ ಮತ್ತಷ್ಟು ಹಬ್ಬಲು ನೀರು ಸಹಕರಿಸುತ್ತದೆ! ಪೆಟ್ರೋಲ್‌ ಸಾಮಾನ್ಯವಾಗಿ ನೀರಿನಲ್ಲಿ ತೇಲುತ್ತದೆ. ಹಾಗಾಗಿ, ಪೆಟ್ರೋಲ್‌-ಡೀಸೆಲ್ ಸಂಬಂಧಿತ ಬೆಂಕಿ ವೇಳೆ ನೀರು ಬಳಸಿದರೆ, ನೀರು ಹೋದಲ್ಲೆಲ್ಲಾ ಇಂಧನ ಹರಿಯುತ್ತದೆ. ಆಗ, ಬೆಂಕಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇರುತ್ತದೆ. ವಿಚಿತ್ರವೆಂದರೆ, ನಮ್ಮಲ್ಲಿ ಇಂಥ ಬೆಂಕಿ ಆರಿಸುವಾಗ ಹೆಚ್ಚು ಬಳಸುವುದು ನೀರನ್ನೇ!

ಸಿಸಿ ಕ್ಯಾಮೆರಾ ಲೆಕ್ಕಕ್ಕುಂಟು ಆಟಕ್ಕಿಲ್ಲ
ವಿದೇಶಗಳಲ್ಲಿ ಗೋಡೆಗಳಿಗೆ ಅಗ್ನಿಶಮನ ಉಪಕರಣಗಳನ್ನು ಅಳವಡಿಸಿರುತ್ತಾರೆ. ಸಿಸಿ ಕ್ಯಾಮೆರಾ ಅಳವಡಿಸಿ, ಅದನ್ನು ನಿರಂತರವಾಗಿ ಪರಿಶೀಲಿಸುವ ಮತ್ತು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಇರುತ್ತದೆ. ನಮ್ಮಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ತುಂಬಾ ಕಡಿಮೆ. ಇದ್ದರೂ ಅವುಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತೆ ಇರುತ್ತವೆ. ಅದರಲ್ಲೂ ನೂರಾರು ವಾಹನಗಳು ನಿಲ್ಲುವ ಜಾಗದಲ್ಲಿ ಸಿಸಿ ಕ್ಯಾಮೆರಾಗಳು ಇರುವುದೇ ಇಲ್ಲ. ಇನ್ನು ನಮ್ಮಲ್ಲಿ ಹೆಚ್ಚೆಂದರೆ ಎರಡು ಜೆಟ್‌ಗಳಿರುವ ಅಗ್ನಿ ಶಮನ ವಾಹನಗಳು ಹೆಚ್ಚು. ಆದರೆ, ಮುಂದುವರಿದ ದೇಶಗಳಲ್ಲಿ ಒಂದೇ ವಾಹನದಲ್ಲಿ ಆರೆಂಟು ಜೆಟ್‌ಗಳು (ನೀರು ಚಿಮ್ಮಿಸುವ ನಲ್ಲಿಗಳು) ಇರುತ್ತವೆ ಹಾಗೂ ಅವುಗಳಿಂದ ಅತ್ಯಂತ ವೇಗವಾಗಿ ನೀರು ಚಿಮ್ಮುತ್ತದೆ.

ಏರ್‌ ಶೋ ಪಾರ್ಕಿಂಗ್‌ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದ ಕುರಿತು ಎಫ್ಎಸ್‌ಎಲ್‌ ವರದಿ ಬರಬೇಕಿದೆ. ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ
 ಡಾ.ಕಲಾ ಕೃಷ್ಣಸ್ವಾಮಿ, ಈಶಾನ್ಯ ವಿಭಾಗದ ಡಿಸಿಪಿ

ವಿಜಯಕುಮಾರ್‌ ಚಂದರಗಿ ವೆಂ.ಸುನೀಲ್‌ಕುಮಾರ್‌/ ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.