ಸೇವೆ ಕಾಯಂಗೊಳ್ಳದ ಎಂಜಿನಿಯರ್‌ಗಳಿಗೆ ಬಡ್ತಿ

Team Udayavani, Jul 11, 2019, 3:06 AM IST

ಕಲಬುರಗಿ: ತರಾತುರಿಯಲ್ಲಿ ಎಂಜಿನಿಯರ್‌ಗಳ ಬಡ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇನ್ನೂ ಸೇವೆ ಕಾಯಂ ಆಗದೇ ಇರುವ 205 ಎಂಜಿನಿಯರ್‌ಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ಪತನ ಭೀತಿ ನಡುವೆ ಎರಡು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಪದೋನ್ನತಿ ಸಮಿತಿ (ಡಿಪಿಸಿ) ಸಭೆಯಲ್ಲಿ 800ಕ್ಕೂ ಹೆಚ್ಚು ಎಂಜಿನಿಯರ್‌ಗಳಿಗೆ ಸಹಾಯಕ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಬಡ್ತಿ ನೀಡಲು ಪಟ್ಟಿ ಅಖೈರುಗೊಳಿಸಲಾಗಿದೆ. ಹೀಗಾಗಿ, ಬಡ್ತಿ ಪಟ್ಟಿಯಲ್ಲಿÉರುವ ಎಂಜಿನಿಯರ್‌ಗಳೆಲ್ಲ ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ನೇಮಕವಾದ 417 ಎಂಜಿನಿಯರ್‌ಗಳ ಸೇವೆಯನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ಕೆಲವು ದೋಷಗಳಾಗಿವೆ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುಖ್ಯವಾಗಿ 2019ರ ಏ.5ರಂದು ಕೆಎಟಿಯು ನೇಮಕಾತಿಯಲ್ಲಿ ದೋಷಗಳಿರುವುರಿಂದ 417 ಎಂಜಿನಿಯರ್‌ಗಳ ಕಾಯಂ ಕುರಿತು ಪುನ: ಪಟ್ಟಿ ರೂಪಿಸುವಂತೆ ಸರ್ಕಾರ ಹಾಗೂ ಕೆಪಿಎಸ್‌ಸಿಗೆ ಆದೇಶ ನೀಡಿದೆ. ಇದರ ವಿರುದ್ಧ ಕೆಲ ಎಂಜಿನಿಯರ್‌ಗಳು ಕೆಎಟಿ ಆದೇಶದ ವಿರುದ್ಧ ಕಳೆದ ಏಪ್ರಿಲ್‌ 30ರಂದು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಡಬ್ಲ್ಯುಪಿ 20127-2019ರಂದು ಪ್ರಕರಣ ದಾಖಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಆರ್‌.ದೇವದಾಸ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಕಳೆದ ಏಪ್ರಿಲ್‌ 30ರಂದು ಕೆಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯ ದಿನಾಂಕದವರೆಗೂ ಆದೇಶ ಜಾರಿಯಲ್ಲಿರುತ್ತದೆ ಎಂದು ತೀರ್ಪು ನೀಡಿದೆ. ಒಟ್ಟಾರೆ ಎಂಜಿನಿಯರ್‌ಗಳ ಕಾಯಂ ಸೇವೆ ಕುರಿತು ತೊಡಕು ಎದುರಿಸುತ್ತಿರುವ 205 ಜನರನ್ನು 800 ಎಂಜಿನಿಯರ್‌ಗಳ ಬಡ್ತಿ ಪಟ್ಟಿಯಲ್ಲಿ ಸೇರಿಸಿರುವುದೇ ವಿವಾದಕ್ಕೆ ಕಾರಣವಾಗಿದೆ.

ಬಡ್ತಿ ಪಡೆಯಲು ಮುಂದಾಗಿರುವ ಎಂಜಿನಿಯರ್‌ಗಳು, ತಾವು ಬಡ್ತಿ ಪಡೆದಿದ್ದರೂ ನ್ಯಾಯಾಲಯದ ಆದೇಶ ಒಳಪಡುತ್ತದೆ ಎಂದು ಹೇಳುತ್ತಾರೆ. ಬಲ್ಲ ಮಾಹಿತಿಗಳ ಪ್ರಕಾರ ಬಡ್ತಿ ಪಟ್ಟಿಯಲ್ಲಿರುವ ಎಂಜಿನಿಯರ್‌ಗಳು ಆಯಕಟ್ಟಿನ ಜಾಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

417 ಎಂಜಿನಿಯರ್‌ಗಳ ನೇಮಕಾತಿ ಸಕ್ರಮಗೊಳಿಸುವಲ್ಲಿಯೇ ಹಲವು ದೋಷಗಳಿವೆ. ಅಂಕ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಿರುವುದು ಜತೆಗೆ ಇತರ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಪ್ರಮುಖ ಆರೋಪ. ಅಲ್ಲದೆ ಕೆಲವೊಬ್ಬರು ಸುಳ್ಳು ಜಾತಿ ಪ್ರಮಾಣ ಪತ್ರ ಹಚ್ಚಿ ಸೇವೆಗೆ ಸೇರಿರುವ ಗಂಭೀರ ಪ್ರಕರಣಗಳೂ ಇವೆ. ಅಂತವರ ಹೆಸರುಗಳು ಸಹ ಬಡ್ತಿ ಪಟ್ಟಿಯಲ್ಲಿರುವುದು ಆಶ್ಚರ್ಯ ಮೂಡಿಸಿದೆ.

ಪಟ್ಟಿ ಪಡೆಯಲು ಪ್ರಯತ್ನ: 800 ಎಂಜಿನಿಯರ್‌ಗಳ ಬಡ್ತಿಯಲ್ಲಿ ಕೃಷ್ಣಾ ಜಲಾಯನ ಪ್ರದೇಶದ 417 ಎಂಜಿನಿಯರ್‌ಗಳ ಪೈಕಿ 205 ಎಂಜಿನಿಯರ್‌ಗಳು ಸೇರಿದ್ದು, ಪಟ್ಟಿಯನ್ನು ಅಖೈರುಗೊಳಿಸಲಾಗಿದೆ. ಆದರೆ, ಪಟ್ಟಿ ಪಡೆಯಲು ಪ್ರಯತ್ನಿಸಿದರೂ ಯಾರಿಗೂ ಪಟ್ಟಿ ನೀಡದಿರುವಂತೆ ಸೂಚನೆ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

417 ಎಂಜಿನಿಯರ್‌ಗಳ ಸೇವೆ ಕಾಯಂ ಸಲುವಾಗಿ ಹೋರಾಟ ರೂಪಿಸಿ ಸರ್ಕಾರದ ಮೇಲೆ ಒತ್ತಡ ತಂದು ಬಹುತೇಕ ಯಶಸ್ವಿಯಾಗಿದ್ದೇವೆ. ಆದರೆ, ಇದರಲ್ಲಿ 205 ಎಂಜಿನಿಯರ್‌ಗಳ ಬಡ್ತಿಯಾಗಿರುವುದು ಗೊತ್ತಾಗಿದೆ. ಆದರೆ, ಈ ಕುರಿತು ಯಾರೂ ವಿವರಣೆ ನೀಡಿಲ್ಲ. ಕಾಯಂ ಸಲುವಾಗಿ ಹೋರಾಟ ನಡೆದಿರುವಾಗಲೇ ಬಡ್ತಿ ಹೊಂದಿರುವುದು ಸಂತೋಷದ ವಿಷಯ. ಆದರೆ, ಬಡ್ತಿ ಸಮರ್ಪಕ ಆಗಿರಬೇಕೆಂಬುದು ನಮ್ಮ ಬಯಕೆ.
-ಲಕ್ಷ್ಮಣ ದಸ್ತಿ, ಹೋರಾಟಗಾರ

* ಹಣಮಂತರಾವ ಭೈರಾಮಡಗಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ