ನಾನು ಆಡಿಸಿ ಬೆಳೆಸಿದ ಹುಡುಗ; ಮಾಮಾ….ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಅಪ್ಪು
ಹಿರಿಯ ನಟ ಶಿವರಾಂ
Team Udayavani, Oct 30, 2021, 6:40 AM IST
ಅಪ್ಪು ಹುಟ್ಟು ಕಲಾವಿದ. ಬೆಳೆಯುತ್ತ.. ಬೆಳೆಯುತ್ತ… ಎಷ್ಟು ಬೇಗ ದೊಡ್ಡ ಕಲಾವಿದನಾದ. ಚಿಕ್ಕ ವಯಸ್ಸಿನಿಂದಲೇ ಅವನಿಗೆ ಅದೆಷ್ಟು ಅಭಿಮಾನಿಗಳು. ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಲೇ ಸಾಗರೋಪಾದಿಯಲ್ಲಿ ಬಂದಿರುವ ಜನಸ್ತೋಮ. ಎಷ್ಟು ಜನ ಸಂಪಾದನೆ ಮಾಡಿದ್ದಾನೆ. ಏನು ನಗು ಅವನದು.
ನಾನು ಆಡಿಸಿ ಬೆಳೆಸಿದ ಹುಡುಗ ಅಪ್ಪು. ನನ್ನನ್ನು ಮಾಮಾ…ಮಾಮಾ… ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಹುಡುಗ. ಡಾ| ರಾಜ್‌ಕುಮಾರ್ ಅವರಂತೆಯೇ ಸಂಸ್ಕಾರ, ವಿಧೇಯತೆ, ಗುರು ಹಿರಿಯರು ಎಂದರೆ ಪ್ರೀತಿ ಗೌರವ ತೋರುತ್ತಿದ್ದ ಹುಡುಗ.
ದುಃಖ ಇಮ್ಮುಡಿಸುತ್ತೆ. ಬಹಳ ವಿರಳವಾದ ವ್ಯಕ್ತಿತ್ವ ಇದ್ದಂತಹ ಹುಡುಗ. ಎಲ್ಲವನ್ನೂ ಬಲ್ಲವನಾಗಿದ್ದ. ಅಷ್ಟು ದೊಡ್ಡ ಸ್ಟಾರ್ ಆದರೂ ಮಾನವೀಯತೆ ಹೊಂದಿದ್ದ. ದೊಡ್ಡ ನಟ ಆದ ಮೇಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆತನ ಭೇಟಿಯನ್ನು ನಾನೇ ಆವಾಯ್ಡ ಮಾಡುತ್ತಿದ್ದೆ. ಏಕೆಂದರೆ, ಎಷ್ಟೇ ಜನ ಇದ್ದರೂ ನಾನು ಕಾಣಿಸಿದರೆ ಕೆಳಗೆ ಬಂದು ಮಾಮಾ ಎಂದು ಕಾಲಿಗೆ ಬೀಳುತ್ತಿದ್ದ, ತಬ್ಬಿಕೊಳ್ಳುತ್ತಿದ್ದ. ಅಭಿಮಾನಿಗಳು ತಪ್ಪು ತಿಳಿದಾರು ಎಂದು ನಾನು ಅವಾಯ್ಡ ಮಾಡುತ್ತಿದ್ದೆ.
ಅಪ್ಪು ಯಾರನ್ನೂ ಎಂದಿಗೂ ವ್ಯವಹಾರದ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಚಿಕ್ಕ ಹುಡುಗನಾಗಿದ್ದಾಗಿನಿಂದ ನಾನು ನೋಡಿದ್ದೇನೆ. ಶಬರಿಮಲೆ ಯಾತ್ರೆಗೆ ಅವರ ತಂದೆ ಅವನನ್ನು ಹೆಗಲ ಮೇಲೆ ಕೂರಿಸಿಕೊಂಡು 46 ಕಿ.ಮೀ. ದೊಡ್ಡ ಪಾದದಲ್ಲಿ ನಡೆದುಕೊಂಡು ಬರೋರು. ಆಗಲೇ ಎಲ್ಲರ ಹೃದಯ ಗೆದ್ದಂತಹ ಹುಡುಗ. ಚಿಕ್ಕವಯಸ್ಸಿನಿಂದಲೇ ಇವನು ಶಿವಣ್ಣ ಮಾಡುತ್ತಿದ್ದ ಡಾನ್ಸ್ ಮೂವ್‌ಮೆಂಟ್ ನೋಡಿಕೊಂಡು ಆತನ ಸಿನೆಮಾದಲ್ಲಿ ಮಾಡುತ್ತಿದ್ದ.
ಅಪ್ಪು ಹುಟ್ಟು ಕಲಾವಿದ, ಚಿಕ್ಕ ವಯಸ್ಸಿನಿಂದಲೇ ಪ್ರತಿಭೆ ಇತ್ತು. ಬೆಳೆಯುತ್ತ.. ಬೆಳೆಯುತ್ತ… ಎಷ್ಟು ಬೇಗ ಕಲಾವಿದ ಆದ. ಆದರೆ, ಯಾಕೋ ಏನೋ ನನಗೆ ಅರ್ಥವಾಗುತ್ತಿಲ್ಲ. ಈ ವರ್ಕ್ ಔಟ್ ಬೇಕಾ, ಎಲ್ಲವೂ ನನಗೆ ಪ್ರಶ್ನಾರ್ಥಕವಾಗಿದೆ.
ಅಪ್ಪು ಎಂದರೆ ತುಂಬಾ ದೊಡ್ಡ ಮನಸ್ಸಿನ ಹುಡುಗ. ಯಾರಿಗೂ ಮನಸ್ಸು ಹುಣ್ಣು ಮಾಡುತ್ತಿರಲಿಲ್ಲ. ಮೊನ್ನೆ ಸಹ ನಾನು ಯುವರತ್ನ ಸಿನೆಮಾ ನೋಡಿ ತುಂಬಾ ಅದ್ಭುತವಾಗಿ ಅಭಿನಯಿಸಿದ್ದೀಯ. ಇತ್ತೀಚೆಗೆ ನಾನು ಬ್ಯಾಲೆನ್ಸ್$x ಕಂಟ್ರೋಲ್ಡ್ ಅಭಿನಯವನ್ನು ನೋಡಿಲ್ಲ ಎಂದು ಹೇಳಿದ್ದೆ. ಮಾಮಾ… ಎಲ್ಲ ನಿಮ್ಮ ಆಶೀರ್ವಾದ ಎಂದಿದ್ದ. ಬೆಳೆಯಬೇಕಾದ ಹುಡುಗ ಮಿಂಚಿ ಮರೆಯಾಗಿದ್ದಾನೆ.
ಡಾ| ರಾಜ್‌ಕುಮಾರ್ ಅವರಂತೆ ಎಷ್ಟು ಚಂದ ಹಾಡುತ್ತಿದ್ದ. ಪರಿಪೂರ್ಣವಾದ ಕಲಾವಿದ. ನಾನು ಡಾ| ರಾಜ್‌ಕುಮಾರ್ ಅವರ ಮಗ ಎಂಬ ಸಣ್ಣ ಅಹಂ ಇರಲಿಲ್ಲ. ಏನಾದರೂ ಒಡಕು ಬರುತ್ತದೆ ಎಂದರೆ ಹುಷಾರಾಗುತ್ತಿದ್ದ. ಜವಾಬ್ದಾರಿಯುತ ಪ್ರಜೆಯಾಗಬೇಕು, ಸಮಾಜಕ್ಕೆ ಆದರ್ಶವಾಗಿ ಉಳಿಯಬೇಕು ಎಂಬ ಹಂಬಲ ಇತ್ತು. ತಾಯಿಗೆ ಪೆಟ್ ಹುಡುಗ ಇವನು. ಪಾರ್ವ ತಮ್ಮ ಅವರೂ ಅಷ್ಟೇ ಪ್ರಾಣ ಇಟ್ಟು ಕೊಂಡಿದ್ದರು ಇವನ ಮೇಲೆ.
ವೆಸ್ಪಾ ಸ್ಕೂಟರ್‌ನಲ್ಲಿ ಪಯಣ
ಯಾರ ಮನಸ್ಸೂ ನೋಯಿಸು ತ್ತಿರಲಿಲ್ಲ. ತಾಯಿ ಎಂದರೆ ತುಂಬಾ ಪ್ರೀತಿ. ತಾಯಿಯ ತೊಡೆ ಮಗು. ಒಮ್ಮೆ ಸಂಕೇತ್ ಸ್ಟುಡಿಯೋನಲ್ಲಿ ಒಂದು ಡಬ್ಬಿಂಗ್ ಇತ್ತು. ಎರಡು ನಕ್ಷತ್ರ, ಭಕ್ತ ಪ್ರಹ್ಲಾದ ಚಿತ್ರ ಮಾಡಿದ ಸಂದರ್ಭ. ವಜ್ರೆàಶ್ವರಿ ಕಂಬೈನ್ಸ್ ಗಾಂಧಿನಗರದಲ್ಲಿತ್ತು. ಸಂಕೇತ್ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡುವೆ ವಿರಾಮ ಇದ್ದಾಗ ನಾನು ವಜ್ರೆàಶ್ವರಿ ಕಂಬೈನ್ಸ್ ಕಚೇರಿಗೆ ಹೋಗಿ ಬರಬೇಕು, ಅಮ್ಮ ಅಲ್ಲಿದ್ದಾರೆ ಎಂದು ಹೇಳಿದ. ಆಗ ವೆಹಿಕಲ್ ಏನೂ ಇರಲಿಲ್ಲ. ಈಗಿನ ಕಾಲ ಅಲ್ಲ ಅದು ನೋಡಿ. ನನ್ನದೊಂದು ಸ್ಕೂಟರ್, ವೆಸ್ಪಾ ಸ್ಕೂಟರ್ ಇತ್ತು. ಬನ್ನಿ ಮಾಮಾ…ಅದರಲ್ಲೇ ಹೋಗಿ ಬರೋಣ ಎಂದು ಹೇಳಿದ. ಆಯ್ತು ಬಾರಪ್ಪಾ ಎಂದು ನಾನು ಕರೆದುಕೊಂಡು ಹೊರಟುಬಿಟ್ಟೆ. ಆ ನಂತರ ನನಗೆ ಭಯ ಶುರುವಾಯ್ತು. ರಾಜ್‌ಕುಮಾರ್ ಅವರ ಮಗನನ್ನು ವೆಸ್ಪಾದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಎಲ್ಲರೂ ನಮ್ಮನ್ನು ನೋಡೋರೆ. ಅವರ ತಂದೆಯ ಜತೆಯೂ ಇದೇ ರೀತಿಯ ಒಂದು ಅನುಭವ ನನಗೆ ಆಗಿತ್ತು.
ಮತ್ತೊಮ್ಮೆ, ಒಮ್ಮೆ ನಾವೆಲ್ಲರೂ ದುಬಾೖ, ಬಹ್ರೈನ್‌ನಲ್ಲಿ ಮ್ಯೂಸಿಕಲ್ ನೈಟ್ ಕೊಟ್ಟೆವು. ಅಬುಧಾಬಿಯಲ್ಲಿ ಬಿ.ಆರ್.ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ಆದ ನಂತರ ಏನು ಬೇಕು ಹೇಳಿ ಎಂದು ಕೇಳಿದಾಗ ಅಪ್ಪು ಅಮ್ಮನ ಬಳಿ ಓಡಿಹೋದ. ನನಗೆ ಒಂದು ಹ್ಯಾಂಡಿಕ್ಯಾಮ್ ಬೇಕು ಎಂದು ಹೇಳಿದ. ಶೆಟ್ಟರು ಕ್ಯಾಮೆರಾ ಬೇಕಾ ಎಂದು ಕೇಳಿದರೂ ಇವನು ಹ್ಯಾಂಡಿಕ್ಯಾಮ್ ಕೇಳಿದ. ಅವರು ಕೊಡಿಸಿದರು. ಅದನ್ನು ಎಷ್ಟು ಪ್ರೀತಿಯಿಂದ ಇಟ್ಟುಕೊಂಡಿದ್ದ.
ಚಿಕ್ಕ ವಯಸ್ಸಿನಿಂದಲೇ ಅವನಿಗೆ ಎಷ್ಟು ಅಭಿಮಾನಿಗಳು. ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಲೇ ಸಾಗರೋಪಾದಿಯಲ್ಲಿ ಬಂದಿರುವ ಜನಸ್ತೋಮ. ಎಷ್ಟು ಜನ ಸಂಪಾದನೆ ಮಾಡಿದ್ದಾನೆ. ಏನು ನಗು ಅವನದು.
ಹೊಸ ನಿರ್ಮಾಪಕ, ನಿರ್ದೇಶಕರ ಪರಿಚಯ ಮಾಡಿಕೊಡಲು ಸದಾಶಿವನಗರದಲ್ಲಿ ಅವರ ಶ್ರೀಮತಿಯವರ ಜತೆ ಕಚೇರಿ ಮಾಡಿಕೊಂಡಿದ್ದ. ಅಲ್ಲಿ ಎಡಿಟಿಂಗ್ ರೂಂ ಸಹಿತ ಚಿತ್ರರಂಗಕ್ಕೆ ಬೇಕಾದ ಎಲ್ಲ ಸೌಲಭ್ಯ ಇತ್ತು. ನಾನು ಒಮ್ಮೆ ಹೋದಾಗ ಶೋಕೇಸ್‌ನಲ್ಲಿ ರಾಜ್‌ಕುಮಾರ್ ಕುರಿತ ಪುಸ್ತಕ ಇತ್ತು. ನಾನು ಇನ್ನೊಂದು ಪ್ರತಿ ಇದ್ದರೆ ಕೊಡು ಅಪ್ಪು ಎಂದೆ. ಅದಕ್ಕೆ ತತ್‌ಕ್ಷಣ ಯಾವುದು ಮಾಮಾ…ಎಂದು ಕೇಳಿ ಅಲ್ಲಿದ್ದವರನ್ನು ಕರೆದು ನೋಡಿ ಬೇರೆ ಪ್ರತಿ ಇದ್ದರೆ ತರಿಸಿ ಇಲ್ಲವೇ ಇದನ್ನೇ ಕೊಡಿ ಎಂದು ಅದರ ಜತೆಗೆ ಮತ್ತೂಂದು ಪುಸ್ತಕ ಸಹ ಕೊಟ್ಟುಬಿಟ್ಟರು.
ಅಪ್ಪು ಚಿಕ್ಕ ಹುಡುಗ ಇದ್ದಾಗ ನಾನು ಪಾರ್ಟ್ ಮಾಡಿದ್ದೆ. ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಬಾಲ್ಯ ನಟನಾಗಿಯೂ ಆತನ ನಟನೆ ಅಮೋಘ. ಇತ್ತೀಚೆಗೆ, ಪ್ರೇಮ್ ನಿರ್ದೇಶನ ಮಾಡಿದ ಚಿತ್ರದಲ್ಲಿ ಪೋಷಕ ನಟನಾಗಿ ಮೇಸ್ಟ್ರೆ ಪಾರ್ಟ್ ಮಾಡಿದ್ದೆ.
ಡಾ| ರಾಜ್‌ಕುಮಾರ್ ಕಾಡಿನಲ್ಲಿದ್ದಾಗ 108 ದಿನ ಅವರ ಮನೆಯಲ್ಲಿದ್ದೆ. ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ 12 ಗಂಟೆ, 1 ಗಂಟೆಗೆ ಮನೆಗೆ ಬರುತ್ತಿದ್ದೆ. ಎಷ್ಟೋ ಸಲ ಪೂಜೆಗೆ ಪುನೀತ್ ಕುಳಿತುಕೊಳ್ಳಬೇಕು ಎಂದು ಅಮ್ಮ ಹೇಳಿದರೆ ನಮ್ಮ ರಕ್ತ ಸಂಬಂಧಿ ಶಿವರಾಮು ಮಾಮಾ ಕುಳಿತುಕೊಳ್ಳಲಿ ಎಂದು ನನ್ನನ್ನು ಕೂರಿಸಿದ್ದೂ ಇದೆ.
ರಾಘಣ್ಣ, ಶಿವಣ್ಣ, ಅಪ್ಪು ಮೂವರು ಮಕ್ಕಳು ಕನ್ನಡ ಚಿತ್ರರಂಗದ ರತ್ನಗಳೇ.
ಶಬರಿಮಲೆಗೆ ಹೋಗಲು ನಾನೇ ಇರುಮುಡಿ ಕಟ್ಟಬೇಕು. ಮೂವರೂ ಮಾಮಾ.. ಮಾಮಾ.. ಎಂದು ಜತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ದಾರಿ ನಡುವೆಯೂ ಎಂತಹ ಶ್ರದ್ಧೆ, ಭಕ್ತಿ. ತಂದೆಯಂತೆಯೇ ಮಕ್ಕಳು. ಅವರಿಗೆ ನೋವು ಆದರೆ ನಾನು ತಡೆದುಕೊಳ್ಳುತ್ತಿರಲಿಲ್ಲ. ಗುರುವಾರ ಮನೆಗೆ ಹೋದರೆ, ನಿಮ್ಮದೇ ಅಡುಗೆ, ನಿಮ್ಮದೇ ಊಟ ಎಂದು ಜತೆಯಲ್ಲಿ ಕೂರಿಸಿ ಊಟ ಮಾಡಿಸೋರು. ರಾಗಿಮುದ್ದೆ ಹಿದಕವರೆ ಸಾರು ಅವರ ಕುಟುಂಬದ ಜತೆ ಸವಿದಿದ್ದು ನನ್ನ ಜನ್ಮದ ಪುಣ್ಯ.
ನನಗೆ ರಕ್ತ ಹಂಚಿಕೊಳ್ಳದ ಸಂಬಂಧಿಕರು ಡಾ| ರಾಜ್ ಕುಟುಂಬ. ಅಪ್ಪು ಪ್ರೀತಿಯಿಂದ ಮಾಮಾ… ಎಂದು ಹೇಳುವಾಗ ಏನೋ ಆತ್ಮೀಯತೆ. ಇತ್ತೀಚೆಗೆ ಯುವ ನಿರ್ದೇಶಕರು ಒಂದು ಚಿತ್ರ ತೆಗೆಯಬೇಕು ಎಂದು ಬಂದಿದ್ದರು. ಆಗ ಜತೆಗೆ ಹೋಗಿದ್ದೆ. ದಂಪತಿಯನ್ನು ಆಗ ಮಾತನಾಡಿಸಿದ್ದೆ.ಅಶ್ವಿನಿಗೂ ನನ್ನ ಕಂಡರೆ ಪ್ರೀತಿ.
ನನಗೆ ಈಗಲೂ ಇನ್ನೂ ನಂಬಲು ಆಗುತ್ತಿಲ್ಲ. ಅಪ್ಪು ಕಣ್ಮರೆಯಾಗಿದ್ದಾನೆ ಎಂದರೆ ಖಂಡಿತಾ ನಂಬಲು ಆಗುತ್ತಿಲ್ಲ. ಇಲ್ಲೇ ಕುಳಿತುಕೊಂಡು ವೇದನೆಗಳನ್ನು ಅನುಭವಿಸಬೇಕಾಗಿದೆ. ನಾನು ದೇವರನ್ನು ಬಯ್ಯಲ್ಲ, ವಿಧಿಯ ಆಟ ಏನೋ… ಒಂದೂ ಅರ್ಥವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ
ದೇಶದಲ್ಲೇ ದಾಖಲೆ ಬರೆದ ನಾಯಕ ಬಸವರಾಜ್ ಹೊರಟ್ಟಿ: ಸಿಎಂ ಬಣ್ಣನೆ
ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ
ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು
ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್