ಸಾವರ್ಕರ್ ಚರಿತ್ರೆ ಓದಿ ಸಿದ್ದು ಮಾತನಾಡಲಿ: ಶೋಭಾ
Team Udayavani, Oct 22, 2019, 3:04 AM IST
ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ದೇಶದ್ರೋಹಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಮೊದಲು ಸಾವರ್ಕರ್ ಚರಿತ್ರೆ ಓದಿ ಮಾತನಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಾವರ್ಕರ್ ಬಗ್ಗೆ ವಿವಾದ ಸೃಷ್ಟಿಸಿರುವ ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಹೋರಾಟದ ಕಲ್ಪ ನೆಯೇ ಇಲ್ಲ. ಈ ಬಗ್ಗೆ ಅಧ್ಯಯನ ಮಾಡಬೇಕು ಎಂತಲೂ ಅನ್ನಿಸಿಲ್ಲ. ಸಾವರ್ಕರ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದಾರೆ.
ಅಲ್ಲಿನ ಜೈಲಿಗೆ ಒಮ್ಮೆ ಭೇಟಿ ಕೊಟ್ಟು ಪರಿಸ್ಥಿತಿ ಅಧ್ಯಯನ ಮಾಡಿ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಆದರೆ, ಅವರು ರಾಜಕೀಯ ಕಾರಣಕ್ಕೆ, ಪಕ್ಷದ ಮುಖಂಡರ ಓಲೈಕೆಗಾಗಿ ಹಾಗೂ ಮತ ಬ್ಯಾಂಕ್‌ಗಾಗಿ ಸಾವರ್ಕರ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಮೊದಲು ಸಾವರ್ಕರ್ ಚರಿತ್ರೆ ಓದಲಿ. ಸಾವರ್ಕರ್ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ಕುಟುಂಬವೇ ಸಂಪೂರ್ಣ ನಾಶವಾಗಿದೆ. ಸಾವರ್ಕರ್ ಅವರಿಗೆ ಭಾರತ ರತ್ನ ಅಷ್ಟೇ ಅಲ್ಲ ಇನ್ಯಾವುದೇ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಎಂದರು.