1,001 ಮೆಟ್ಟಲೇರಿ ಚಾಮುಂಡಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ
Team Udayavani, Oct 16, 2018, 4:52 PM IST
ಮೈಸೂರು : ನವರಾತ್ರಿಯ ಈ ಶುಭಪರ್ವದಲ್ಲಿ, ಇಲ್ಲಿನ ಪ್ರಸಿದ್ಧ ಪ್ರವಾಸೀ ತಾಣವಾಗಿರುವ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿಕೊಂಡು ದೇವಿಯ ದರ್ಶನ ಪಡೆಯುವ ಆಸಕ್ತಿಯನ್ನು ಈ ದಿನಗಳಲ್ಲಿ ಅನೇಕ ಸ್ಯಾಂಡಲ್ವುಡ್ ತಾರೆಯರು ತೋರುತ್ತಿರುವುದು ಎಲ್ಲ ಕುತೂಹಲಿಗಳ ಗಮನ ಸೆಳೆಯುತ್ತಿರುವ ವಿದ್ಯಮಾನವಾಗಿದೆ.
ಅಂತೆಯೇ ಇಂದು ಮಂಗಳವಾರ ನಟಿ ಹರಿಪ್ರಿಯಾ ಅವರು ಚಾಮುಂಡಿ ಬೆಟ್ಟದ ತಪ್ಪಲಿನಿಂದ ಆರಂಭವಾಗುವ 1,001 ಮೆಟ್ಟಿಲುಗಳನ್ನು ಹತ್ತಿಕೊಂಡು ಚಾಮುಂಡಿ ದೇವಿಯ ದರ್ಶನ ಪಡೆದು ಕೃತಾರ್ಥರಾದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಹರಿಪ್ರಿಯಾ ಅವರು “ಮೈಸೂರು ನನ್ನ ಇಷ್ಟದ ಊರು; ಬೆಟ್ಟ ಹತ್ತುವುದು ನನ್ನ ಅತ್ಯಾಸಕ್ತಿಯ ಹವ್ಯಾಸ; ಅಂತೆಯೇ ಇಲ್ಲೀಗ ನಾನು ಎರಡನೇ ಬಾರಿ 1,001 ಮೆಟ್ಟಿಲುಗಳನ್ನು ಹತ್ತಿ ಬಂದು ಶ್ರೀ ಚಾಮುಂಡಿ ದೇವಿಯ ದರ್ಶನ ಪಡೆದಿದ್ದೇನೆ; ಮನಸ್ಸಿಗೆ ಆನಂದವಾಗಿದೆ’ ಎಂದು ಹೇಳಿದರು.
ಅಂದ ಹಾಗೆ ದಸರಾ ಮಹೋತ್ಸವದ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನಿನಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಹರಿಪ್ರಿಯ ಸಾದರಪಡಿಸಿರುವ ನೃತ್ಯ ಕಾರ್ಯಕ್ರಮ ಎಲ್ಲರನ್ನು ರಂಜಿಸಿದೆ. ಹರಿಪ್ರಿಯಾ ಅವರು ನೀರ್ ದೋಸೆ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆಯೇ ಸಭಿಕರಾಗಿ ನೆರೆದಿದ್ದ ಯುವ ಸಮೂಹ ಹುಚ್ಚೆದ್ದು ಕುಣಿದಿರುವುದು ವಿಶೇಷವೆನಿಸಿತು.