ಸತೀಶ್ ಜಾರಕಿಹೊಳಿಗೆ ಮತ್ತೆ ಮಂತ್ರಿಗಿರಿ ಸಂಭವ
Team Udayavani, Jan 22, 2017, 3:45 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿಸಿ ಕೊಂಡು ಜೆಡಿಎಸ್ ಕಡೆಗೆ ಮುಖ ಮಾಡಿರುವ ಮಾಜಿ
ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಕಸರತ್ತು ನಡೆದಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಪಕ್ಷದ ವಲಯದಲ್ಲಿ ಈ ರೀತಿ ಪ್ರಯತ್ನ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿಯ ಬೇಕಾದರೆ, ಸತೀಶ್ ಜಾರಕಿಹೊಳಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮಹಾರಾಷ್ಟ್ರ ಮಾಜಿ
ಸಿಎಂ ಪೃಥ್ವಿರಾಜ್ ಚೌಹಾಣ್ ಮೂಲಕ ಹೈಕಮಾಂಡ್ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಥ್ವಿರಾಜ್ ಚೌಹಾಣ್ ಅವರ ಸೋದರನ ಮಗಳು ಹಾಗೂ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಅಂಜಲಿ ನಿಂಬಾಳ್ಕರ್ ಈ ನಿಟ್ಟಿನಲ್ಲಿ ಯತ್ನ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿಯನ್ನು ಮಂತ್ರಿ ಮಾಡದಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಭವಿಷ್ಯದಲ್ಲಿ ಕಷ್ಟವಾಗುತ್ತದೆ. ಹೀಗಾಗಿ, ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ತಮ್ಮ ದೊಡ್ಡಪ್ಪನೂ ಆಗಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮೂಲಕ ಹೈಕಮಾಂಡ್ಗೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಸತೀಶ್
ಜಾರಕಿಹೊಳಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್ ಅವರೊಂದಿಗೂ ಪೃಥ್ವಿರಾಜ್ ಚೌಹಾಣ್ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಷ್ಟ ಕಾಲದಲ್ಲಿ ತಮ್ಮ ಜೊತೆಗಿದ್ದ ಸತೀಶ್ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಟ್ಟು ಅವರ ಸಹೋದರ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿದ್ದರು. ಸಿದ್ದರಾಮಯ್ಯ ಅವರ ನಡವಳಿಕೆಯಿಂದ
ಬೇಸತ್ತಿರುವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಯಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ
ಅವರು ಜೆಡಿಎಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಜೆಡಿಎಸ್ ಸೇರುವುದು ಬಹುತೇಕ ಖಚಿತ ಎಂಬ
ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಯತ್ನ
ನಡೆದಿದೆ ಎಂದು ಹೇಳಲಾಗಿದೆ. ಸತೀಶ್ ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಒಂದೇ ಕುಟುಂಬ
ಹಾಗೂ ಒಂದೆ ಸಮುದಾಯದವರಿಗೆ ಎರಡು ಸಚಿವ ಸ್ಥಾನ ನೀಡಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ರಮೇಶ್ ಜಾರಕಿ
ಹೊಳಿಯನ್ನು ಸಂಪುಟದಿಂದ ಕೈ ಬಿಡುವ ಕುರಿತು ಸಿಎಂ ಸಿದ್ದರಾಮಯ್ಯ ಆಲೋಚನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸತೀಶ್ ಜಾರಕಿಹೊಳಿ ಸಂಪುಟ ಸೇರಿದರೆ ಸಮಾಜ ಕಲ್ಯಾಣ ಖಾತೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ
ಬರುತ್ತಿವೆ.