ಶಶಿಕಲಾ ಜೊಲ್ಲೆಗೆ ಗೃಹ ಖಾತೆ ಕೊಡಲಿ: ಹೆಬ್ಬಾಳಕರ
Team Udayavani, Jan 29, 2020, 3:02 AM IST
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಶಶಿಕಲಾ ಜೊಲ್ಲೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾಮರ್ಥ್ಯ ಇದೆ. ಹೀಗಾಗಿ, ಅವರಿಗೆ ಗೃಹ ಖಾತೆ, ಹಣಕಾಸು ಇಲ್ಲವೇ ಲೋಕೋಪಯೋಗಿ ಖಾತೆ ಕೊಡಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಗ್ರಹಿಸಿದ್ದಾರೆ.
ಮಂಗಳವಾರ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಮನೆಯಲ್ಲಿ ಎಲ್ಲರೂ ಹೋಂ ಮಿನಿಸ್ಟರ್ ಎಂದು ಕರೆಯುತ್ತಾರೆ. ಹಾಗಿದ್ದಲ್ಲಿ ಶಶಿಕಲಾ ಜೊಲ್ಲೆ ಅವರಿಗೆ ಗೃಹ ಖಾತೆ ಕೊಡಲಿ.
ಆಗ ಅವರಿಂದ ಇನ್ನೂ ಉತ್ತಮ ಸೇವೆ ರಾಜ್ಯಕ್ಕೆ ದೊರೆಯಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ, “ಮಹಿಳಾ ಮತ್ತು ಮಕ್ಕಳ ಖಾತೆ ಸಿಕ್ಕಿದ್ದು ನನ್ನ ಪುಣ್ಯ. ಮಹಿಳೆಯರ ಕಷ್ಟ ಏನು ಎಂಬುದು ನನಗೆ ಚೆನ್ನಾಗಿ ಪರಿಚಯ ಇದೆ. ಹೀಗಾಗಿ, ಸಿಕ್ಕ ಖಾತೆಯ ಬಗ್ಗೆ ತೃಪ್ತಿ ಇದೆ’ ಎಂದು ಸ್ಪಷ್ಟನೆ ನೀಡಿದರು.