ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆ; ಕೇಂದ್ರ ಸಚಿವರ ಭೇಟಿ ಮಾಡಿದ ಈಶ್ವರಪ್ಪ ನೇತೃತ್ವದ ನಿಯೋಗ
Team Udayavani, Nov 24, 2020, 9:44 PM IST
ಬೆಂಗಳೂರು: ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರ ಬುಡಕಟ್ಟು ಜನಾಂಗದ ವ್ಯವಹಾರಗಳ ಸಚಿವೆ ರೇಣುಕಾ ಸಿಂಗ್ ಸರುತಾ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮಿ, ಹೊಸದುರ್ಗದ ಶಾಖಾಮಠದ ಈಶ್ವರಾನಂದಪುರಿ ಸ್ವಾಮಿ ಹಾಗೂ ಶಿವಾನಂದಪುರಿ ಸ್ವಾಮಿ, ಸಿದ್ದರಾಮಾನಂದಪುರಿ ಸ್ವಾಮಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ವಿರೂಪಾಕ್ಷಪ್ಪ ಅವರನ್ನೊಳಗೊಂಡ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಎಸ್‌ಟಿಗೆ ಸೇರ್ಪಡೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿತು.
ಕುರುಬ ಸಮಾಜದ ಇತಿಹಾಸದ ಹಾಗೂ ಎಸ್‌ಟಿಗೆ ಸೇರಿಸುವ ಅವಶ್ಯಕತೆ ಕುರಿತು ಸಚಿವರಿಗೆ ಇದೇ ಸಂದರ್ಭದಲ್ಲಿ ವಿವರಿಸಲಾಯಿತು.
ಈ ಸಂಬಂಧ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್. ಈಶ್ವರಪ್ಪ, ನಮ್ಮ ಬೇಡಿಕೆ ಬಗ್ಗೆ ಕೇಂದ್ರದ ಸಚಿವರಿಗೆ ಮನವಿ ಸಲ್ಲಿಸಲು ಪಕ್ಷಾತೀತವಾಗಿ ಬಂದಿದ್ದೇವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಕೇಂದ್ರ ಸಮಾಜ ಕಲ್ಯಾಣ ಸಚಿವ ಅರ್ಜುನ ಮುಂಡಾ, ಬುಡಕಟ್ಟು ಜನಾಂಗದ ವ್ಯವಹಾರಗಳ ಸಚಿವೆ ರೇಣುಕಾ ಸಿಂಗ್ ಸರುತಾ ಸೇರಿ ಹಲವರು ನಾಯಕರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಸಂಬಂಧ ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಿಕೊಳ್ಳಲಾಗಿದ್ದು ಬೆಂಗಳೂರಿನಲ್ಲಿ ಸಭೆ ಸಹ ನಡೆಸಿ ಕೇಂದ್ರದ ಮುಂದೆ ಇಡಬೇಕಾದ ಬೇಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಮುಂದುವರಿದ ಭಾಗವಾಗಿ ದೆಹಲಿಗೆ ನಿಯೋಗ ಭೇಟಿಯಾಗಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶಮೂರ್ತಿ, ಖಜಾಂಚಿ ಕೆ.ಈ. ಕಾಂತೇಶ, ಮುಖಂಡರಾದ ಪುಟ್ಟಸ್ವಾಮಿ, ಆನೇಕಲ್ ದೊಡ್ಡಯ್ಯ ಮತ್ತು ಸಂತೋಷ್ ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444