ಸಿದ್ದರಾಮಯ್ಯ ಸರ್ಕಾರದಿಂದ ಜಿಹಾದಿ ಬೆಂಬಲ: ಯೋಗಿ

Team Udayavani, May 9, 2018, 6:00 AM IST

ಸುಳ್ಯ/ಕುಂದಾಪುರ: ಕರ್ನಾಟಕದಲ್ಲಿ ಜಿಹಾದಿ ಕೃತ್ಯಗಳನ್ನು ಪೋಷಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯವನ್ನು ಭಯೋತ್ಪಾದನಾ ಕೇಂದ್ರವನ್ನಾಗಿಸುವ ಹುನ್ನಾರ ನಡೆಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಗಂಭೀರ ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದಾರೆ.

ಸುಳ್ಯದಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಸಂಜೆ ನಡೆದ ಬೃಹತ್‌ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 24ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ ಜಿಹಾದಿ ಶಕ್ತಿಗಳನ್ನು ಮಟ್ಟಹಾಕಲು ಸಿದ್ದರಾಮಯ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ, ಮಾಫಿಯಾ, ಗೂಂಡಾಗಿರಿಗಳ ಹುಟ್ಟಡಗಿಸಲಾಗಿದೆ. 24 ತಾಸುಗಳಲ್ಲಿ ಅಕ್ರಮ ಕಸಾಯಿಖಾನೆ ಮುಚ್ಚಿದ್ದೇವೆ. ಆದರೆ ಸಿದ್ದರಾಮಯ್ಯಗೆ ಇದು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಆಳ್ವಿಕೆಯ ಪ್ರತೀಕವಾಗಿರುವ ರಾಮರಾಜ್ಯ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದ ಅವರು, ಧರ್ಮ- ಜಾತಿ ವಿಘಟನೆ ಮೂಲಕ ಸಮಾಜ ಒಡೆಯುವ ಕಾಂಗ್ರೆಸ್‌ ಸರಕಾರವನ್ನು ಕಿತ್ತೂಗೆಯುವಂತೆ ಮನವಿ ಮಾಡಿದರು.

ಬಿಜೆಪಿ ಸಾಧನೆ ತಿಳಿಸಲು ಪುನರಾಗಮನ: ನಾನು ಆಗಾಗ ಕರ್ನಾಟಕಕ್ಕೆ ಯಾಕೆ ಬರುವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯ ಸಾಧನೆಗಳನ್ನು ತಿಳಿಸಲು ನಾನು ಆಗಾಗ ಇಲ್ಲಿಗೆ ಬರುತ್ತಿದ್ದೇನೆಂದು ಯೋಗಿ ಆದಿತ್ಯನಾಥ ತಿಳಿಸಿದರು. ತ್ರಾಸಿಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಪರವಾಗಿ ಮತಯಾಚಿಸಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೆ ಅಭಿವೃದ್ಧಿ ಸುಲಭ ಸಾಧ್ಯ. ಇಲ್ಲದಿದ್ದರೆ ಕರ್ನಾಟಕದಂತಹ ಸ್ಥಿತಿ ಎದುರಾಗುತ್ತದೆ ಎಂದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ