ಹಲ್ಲಿ ಬಿದ್ದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
Team Udayavani, Jul 17, 2019, 3:00 AM IST
ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 81 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಕೆಲವರನ್ನು ಮನೆಗೆ ಕಳುಹಿಸಿದರೆ, ತೀವ್ರವಾಗಿ ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಮೃದ್ಧಿ ಸೇವಾ ಸಂಸ್ಥೆಯವರು ಎಲ್ಲ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತಾರೆ. ಬಿಸಿಯೂಟದ ಪಾತ್ರೆಯಲ್ಲಿ ಹಲ್ಲಿ ಬಿದ್ದಿತ್ತು. ಆಹಾರವನ್ನು ಹಾಗೆಯೇ ಸೇವಿಸಿದ್ದರಿಂದ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡರು. ಇದನ್ನು ಗಮನಿಸಿದ ಶಿಕ್ಷಕರು-ಪಾಲಕರು ವಿದ್ಯಾರ್ಥಿಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆ ತಂದರು.
ಯಾವುದೇ ಪ್ರಾಣಾಪಾಯ ಇಲ್ಲ ಎಂದು ಕಾಕತಿ ಪೊಲೀಸರು ತಿಳಿಸಿದ್ದಾರೆ. ಎಸಿಪಿ ಬಾಲಚಂದ್ರ ಬಿ.ಎಸ್., ಕಾಕತಿ ಪಿಎಸ್ಐ ಮಂಜುನಾಥ ಭಜಂತ್ರಿ ಮತ್ತು ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.