ಭತ್ತಕ್ಕೆ ಬೆಂಬಲ ಬೆಲೆ ನಿಗದಿ
Team Udayavani, Nov 14, 2021, 7:10 AM IST
ಬೆಂಗಳೂರು: ರಾಜ್ಯ ಸರಕಾರವು ಪಡಿತರ ಅಕ್ಕಿ ಪೂರೈಕೆಗೆ ಬೇಕಾಗುವ ಭತ್ತ ಖರೀದಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದು, ಖರೀದಿಗೆ ರೈತರಿಂದ ನೋಂದಣಿ ಪ್ರಾರಂಭಿ ಸಲು ಸೂಚನೆ ನೀಡಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಈ ಬಗ್ಗೆ ಆದೇಶ ಹೊರ ಡಿಸಲಾಗಿದೆ. ಕೇಂದ್ರ ಸರಕಾರ ಸಾಮಾನ್ಯ ಭತ್ತ ಕ್ವಿಂಟಾಲ್ಗೆ 1,940 ರೂ., ಎ ಗ್ರೇಡ್ ಭತ್ತಕ್ಕೆ 1,960 ರೂ. ಬೆಲೆ ನಿಗದಿ ಪಡಿಸಿದ್ದು, ಅದರಂತೆ ಭತ್ತ ಮಾರಾಟ ಮಾಡಲು ಇಚ್ಛಿಸುವ ರೈತರು ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.
2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 3.35 ಲಕ್ಷ ಮೆ. ಟನ್ ಭತ್ತ ಖರೀದಿಸಲು ಕೇಂದ್ರ ಅನುಮತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನೋಂದಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಒಂದು ತಿಂಗಳು ನೋಂದಣಿ ನಡೆಯಲಿದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.