ಹೊಸ ಹುದ್ದೆ ಸೃಷ್ಟಿ: ಆರ್ಥಿಕ ಇಲಾಖೆ ಒಪ್ಪಿಗೆ
Team Udayavani, Jun 4, 2019, 3:00 AM IST
ಬೆಂಗಳೂರು: ಅರಣ್ಯ ಇಲಾಖೆಯು 3,085 ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಿದ್ದು ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಅರಣ್ಯ ಉತ್ಪನ್ನಗಳ ಕಳ್ಳ ಸಾಗಣೆ, ಅಗ್ನಿ ಅನಾಹುತ ಸಂದರ್ಭಗಳಲ್ಲಿ ಅರಣ್ಯ ಸಂರಕ್ಷಣೆಗೆ ಉಂಟಾಗುತ್ತಿದ್ದ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ಅರಣ್ಯ ಸಹಾಯಕರ ಹುದ್ದೆ ಸೃಷ್ಟಿಸಲಾಗಿದೆ.
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ದೀಪಕ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಹೊಸ ಹುದ್ದೆ ಸೃಷ್ಟಿಗೆ ಶಿಫಾರಸು ಮಾಡಿತ್ತು.
ಅದರನ್ವಯ ಅರಣ್ಯ ಸಹಾಯಕ ಹುದ್ದೆ ಸೃಷ್ಟಿಸಲಾಗಿತ್ತು. ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಆದರೆ, ಈ ಹುದ್ದೆಗಳನ್ನು ಐದು ವರ್ಷಗಳಲ್ಲಿ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ವರ್ಷದ ನವೆಂಬರ್‌ನಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.