ರೈತರ ಸಮಸ್ಯೆಗಳೇ ಬಿಜೆಪಿಗೆ ಅಸ್ತ್ರ

Team Udayavani, Jun 16, 2018, 6:00 AM IST

ಬೆಂಗಳೂರು: ಸಾಲ ಮನ್ನಾ, ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಪರಿಹಾರ ಸಹಿತ ರೈತರ ಸಮಸ್ಯೆಗಳನ್ನು ಮುಂದಿಟ್ಟು ಸಮ್ಮಿಶ್ರ ಸರಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷ ಬಿಜೆಪಿ ಮುಂದಾಗಿದೆ. ಜುಲೈ ಮೊದಲ ವಾರದಲ್ಲಿ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸರಕಾರದ ವಿರುದ್ಧ ಮುಗಿಬೀಳಲು “ರೈತರ ಸಮಸ್ಯೆ’ ಅಸ್ತ್ರ ಬಳಸಲು ತೀರ್ಮಾನಿಸಿದೆ.

ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು  ಈ ನಿಟ್ಟಿನಲ್ಲಿ ರೈತ ಮೋರ್ಚಾದ 6-5 ತಂಡಗಳನ್ನು ರಚಿಸಿ  ಜೂ.30ರವರೆಗೆ ಪ್ರವಾಸ ಮಾಡಿ ಅಧ್ಯಯನ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ತಂಡಗಳು ಗ್ರಾಮೀಣ ಪ್ರದೇಶ ದಲ್ಲಿ ಪ್ರವಾಸ ಮಾಡಿ ರೈತರು ಎದುರಿಸು ತ್ತಿರುವ ಸಮಸ್ಯೆಗಳ ಅಧ್ಯಯನ ಮಾಡಿ ವರದಿ ಸಲ್ಲಿಸಲಿವೆ. ವರದಿಯ ಆಧಾರ ದಲ್ಲಿ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.

ತಂಡಗಳು: ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್‌ ಸವದಿ ನೇತೃತ್ವದ ಮೊದಲ ತಂಡ ಬೆಳಗಾವಿ ನಗರ,ಬೆಳಗಾವಿ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ಶಂಕರಗೌಡ ಪಾಟೀಲ್ ನೇತೃತ್ವದ 2ನೇ ತಂಡ ಬಳ್ಳಾರಿ, ಬೀದರ್‌, ಕಲಬುರಗಿ ನಗರ, ಕಲಬುರಗಿ ಗ್ರಾಮಾಂತರ, ಯಾದಗಿರಿ, ರಾಯ ಚೂರು, ಈಶ್ವರ ಚಂದ್ರ ಹೊಸಮನಿ ನೇತೃತ್ವದ  3ನೇ ತಂಡ ಹಾವೇರಿ, ಗದಗ, ಧಾರವಾಡ, ಧಾರವಾಡ ಗ್ರಾಮೀಣ, ಕೊಪ್ಪಳ, ಉತ್ತರ ಕನ್ನಡ, ನಂಜುಂಡೇಗೌಡ ಅವರ ನೇತೃತ್ವದಲ್ಲಿ 4ನೇ ತಂಡ ಮೈಸೂರು ನಗರ, ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಪವಿತ್ರಾ ರಾಮಯ್ಯ ನೇತೃತ್ವದ 5ನೇ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ  ಮತ್ತು ಶಿವಪ್ರಸಾದ್‌ ನೇತೃತ್ವದ 6ನೇ ತಂಡ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ