ಸಾಲ ಮನ್ನಾ ಘೋಷಣೆ ಮರೀಚಿಕೆ

Team Udayavani, Jan 2, 2019, 2:06 AM IST

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಏಳು ತಿಂಗಳಾದರೂ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಘೋಷಣೆ ಮರೀಚಿಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು. ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರು ರೈತರ ಸಾಲಮನ್ನಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳಿದ್ದಾರೆ ಎನ್ನುತ್ತಿರುವುದು ಜನತಾದಳದ ನಾಯಕರು ಎಷ್ಟು ಸತ್ಯ ಹೇಳುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ದಾಖಲೆಗಳ ಆಧಾರದಲ್ಲಿ ಪ್ರಧಾನಿ ಮೋದಿಯವರು ಮಾತನಾಡಿ, ಕೇವಲ 800 ರೈತರಿಗೆ ಮಾತ್ರ ಸಾಲಮನ್ನಾ ಆಗಿದ್ದು, ಇದೊಂದು ಸುಳ್ಳು ಭರವಸೆ ಎಂದಿದ್ದಾರೆ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರೈತರಿಗೆ ಬ್ಯಾಂಕ್‌ಗಳಿಂದ ಋಣಮುಕ್ತ ಪತ್ರ ನೀಡಬೇಕು. ಆದರೆ, ರಾಜ್ಯದ 800 ರೈತರಿಗೆ ಋಣಮುಕ್ತ ಪತ್ರ ನೀಡಿರುವುದು ಸರ್ಕಾರವೇ ಹೊರತು ಬ್ಯಾಂಕ್‌ಗಳಲ್ಲ. ಸರ್ಕಾರವೇ ಋಣಮುಕ್ತ ಪತ್ರ ನೀಡಿರುವುದು ಎಷ್ಟು ಸಮಂಜಸ? ಬಾಗಲಕೋಟೆಯಲ್ಲಿ 1.40 ಲಕ್ಷ ರೈತರು ಸಾಲ ಪಡೆದಿದ್ದು, ಕೇವಲ 30 ರೈತರಿಗೆ ಮಾತ್ರ ಋಣಮುಕ್ತ ಪತ್ರ ನೀಡಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ 353 ರೈತರಿಗೆ ಋಣಮುಕ್ತ ಪತ್ರ ನೀಡಿ ಸರ್ಕಾರ ಕೈತೊಳೆದುಕೊಂಡಿದೆ. ಉಳಿದ ಜಿಲ್ಲೆಗಳ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ರಚನೆಯಾದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಸರ್ಕಾರ, ಸದನದಲ್ಲಿ 24 ಲಕ್ಷ ರೈತರು ಸಾಲಮನ್ನಾದ ಪ್ರಯೋಜನ ಪಡೆಯಲಿದ್ದಾರೆ ಎಂದಿದೆ. 60ಸಾವಿರ ರೈತರು 24 ಸಾವಿರ ರೈತರಿಗೆ ಸಮಾನವೇ ಎಂಬುದನ್ನು ದೇವೇಗೌಡ ಅವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾದ ಕುರಿತು ಮುಖ್ಯಮಂತ್ರಿಗಳು ನೀಡುತ್ತಿರುವ ಉಡಾಫೆ ಉತ್ತರಕ್ಕೆ ನಿಮ್ಮ ಅಭಿಪ್ರಾಯ ಏನು? ಮುಂದಿನ ಬಜೆಟ್‌ನಲ್ಲಿ ಸಾಲಮನ್ನಾ ಎಂದು ನಿಮ್ಮದೇ
ಮುಖ್ಯಮಂತ್ರಿ ಹೇಳಿರುವ ಅರ್ಥ ಏನು ಎಂದು ದೇವೇಗೌಡ ಅವರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಆಶಾವಾದಿಗಳು
ಬೆಂಗಳೂರು: “ಬಿಜೆಪಿಯವರು ಆಶಾವಾದಿಗಳು, ಆಸೆ ಇಟ್ಟುಕೊಂಡಿರುವುದು ತಪ್ಪೇನೂ ಅಲ್ಲ. ಆದರೆ ಅವರು ಎಣಿಸಿದಂತೆ ಆಗುವುದಿಲ್ಲ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಸಂಕ್ರಾಂತಿ ನಂತರ ಕಂಟಕ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವಿಧಾನಸೌಧ ದಲ್ಲಿ ಪ್ರತಿಕ್ರಿಯಿಸಿದ ಅವರು, ಮದುವೆ ಆಗಿ ತಾಳಿ ಕಟ್ಟಿ ಬೇರೆ ಯವರು ಕರೆದುಕೊಂಡು ಹೋಗಿರು ವಾಗ ಕಿಡ್ನಾಪ್‌ ಮಾಡಿ ಹೆಣ್ಣು ತರುತ್ತೇವೆ ಅನ್ನೋದು ಸರಿಯಲ್ಲ. ಕುಮಾರಸ್ವಾಮಿ ಈಗಾಗಲೇ ತಾಳಿ ಕಟ್ಟಿ ಆಗಿದೆ. ಸರ್ಕಾರ ನಡೆಯುತ್ತಿದೆ. ನಾವು ಹುಟ್ಟಿಸಿದ ಮಕ್ಕಳನ್ನು ಬೇರೆಯವರು ಕರೆದುಕೊಂಡು ಹೋಗುವುದು ಸಂಪ್ರದಾಯ ಅಲ್ಲ ಎಂದು ಚಟಾಕಿ ಹಾರಿಸಿದರು. 

ರಮೇಶ ಜಾರಕಿಹಳಿ ಯಾಕೆ ಸಿಟ್ಟು ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಸಂಪರ್ಕ ಮಾಡಿಲ್ಲ. ಸಿದ್ದರಾಮಯ್ಯ ಅವರು ನನಗೂ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಒಂದು ವೇಳೆ ರಾಜೀನಾಮೆ ಕೊಟ್ಟರೂ ಮತ್ತೆ ಚುನಾವಣೆಗೆ ಹೋಗಬೇಕು. ಇದು ಯಾರಿಗೆ ಲಾಸ್‌ ಆಗುತ್ತೆ. ಜನ ಒಪ್ಪೋದಿಲ್ಲ ಎಂದರು. ಒಬ್ಬರು, ಇಬ್ಬರು ಹೋದರೆ ಆಗೋಲ್ಲ. 18 ಜನ ಹೋಗಬೇಕು. ಬಿಜೆಪಿಯವರು
ಇಲ್ಲಿ ಕೈ ಹಾಕಿದ್ರೆ ಇನ್ನೊಬ್ಬರು ಬಿಜೆಪಿಗೆ ಕೈ ಹಾಕುತ್ತಾರೆ. ಬಿಜೆಪಿಯವರು 10 ಜನ ಕಿತ್ತರೆ, ಇನ್ನೊಬ್ಬರು ನಾಲ್ಕು ಜನ
ಕಿತ್ತರೆ ಮತ್ತೆ ಅದೇ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು. ದೇವೇಗೌಡರು ಮೈತ್ರಿ ಧರ್ಮ ಪಾಲಿಸಿಲ್ಲ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲವೂ ಸಮನ್ವಯ ಸಮಿತಿ ಯಲ್ಲಿ ಚರ್ಚಿಸಿಯೇ ತೀರ್ಮಾನ ಆಗುತ್ತಿದೆ. ಸಮನ್ವಯ ಸಮಿತಿಯಲ್ಲಿ ಸಿದ್ದರಾಮಯ್ಯ ಅವರೂ ಇದ್ದಾರೆ, ಕುಮಾರಸ್ವಾಮಿಯವರೂ ಇದ್ದಾರೆ ಎಂದು ಹೇಳಿದರು.

“ಬಿಎಸ್‌ವೈ ಸನ್ಯಾಸಿ ಅಂದವರು ಮೂರ್ಖರು’
ಗಂಗಾವತಿ: “ಬಿಎಸ್‌ವೈ ಸನ್ಯಾಸಿ ಅಂದವರು ಮೂರ್ಖರು. ಸಿಎಂ ಕುರ್ಚಿ ಆಸೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ’ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, “ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡದಿರುವ ಕಾರಣಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಪ್ರಗತಿ ನಿರಂತರ ವಾಗಿದ್ದು, ಇದನ್ನು ಕಂಡು ಸಹಿಸದೆ ಯಡಿಯೂರಪ್ಪ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಖರೀದಿಸುವ ಹುನ್ನಾರ ನಡೆಸಿದ್ದಾರೆ’ ಎಂದಿದ್ದಾರೆ. “ರಾಜಕೀಯವಾಗಿ ಬಿಜೆಪಿಯವರು ಸನ್ಯಾಸಿಗಳಲ್ಲ ಎಂದೂ ಹೇಳುವ ಮೂಲಕ ಬಲಾತ್ಕಾರದಿಂದ ಅಧಿಕಾರ ಪಡೆಯುವ ಷಡ್ಯಂತ್ರ ಬಯಲಾಗಲಿದೆ. ವಿರೋಧ ಪಕ್ಷದಲ್ಲಿ ಕುಳಿತು ರಚನಾತ್ಮಕ ಕೆಲಸ ಮಾಡದೇ ಅಧಿ ಕಾರದ ಆಸೆಯಿಂದ ಜಾತಿ ರಾಜಕಾರಣ ಮಾಡಿ ಕೆಲ ಶಾಸಕರನ್ನು ಹಣದಿಂದ ಸೆಳೆಯುವ ತಂತ್ರ ನಡೆಸಿದ್ದಾರೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಹಣ ಕೊಟ್ಟು ಶಾಸಕರನ್ನು ಖರೀದಿಸುವ ಮೂಲಕ ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದರು. ಮತ್ತೂಮ್ಮೆ ಅದೇ ರೀತಿ ಮಾಡುವ ಮೂಲಕ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಂದ  ರಾಜೀನಾಮೆ ಕೊಡಿಸಿ ಸರ್ಕಾರ ರಚನೆ ಮಾಡುವ ಕುತಂತ್ರ ನಡೆಯುವುದಿಲ್ಲ’ ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ