
ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕು
Team Udayavani, Nov 17, 2019, 3:00 AM IST

ಬೆಂಗಳೂರು: ಡಿ.5ರಂದು ನಡೆಯಲಿರುವ 15 ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಗೆ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ದೇವರಹಳ್ಳಿ ಸೋಮಶೇಖರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
ಇದಕ್ಕೂ ಮೊದಲು ಸೋಮಶೇಖರ್ ಅವರು, ದೇವರಾಜ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಸಲ್ಲಿಸಿದರು. ಬಳಿಕ, ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದರು.
ಪಕ್ಷದ ವರಿಷ್ಟ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಮಹ ದೇವ್, ಅಶ್ವಿನ್ ಕುಮಾರ್ ಇತರರು ಸಾಥ್ ನೀಡಿದರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಕೀಲ ಕೆ.ಎನ್.ಶಂಕರೇ ಗೌಡ ಮತ್ತು ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯಿಂದ ಎಚ್. ಡಿ.ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಎದುರಾದರೂ ಮಾತನಾಡದ ಅಣ್ತಮ್ಮ
ಹುಣಸೂರು: ಹುಣಸೂರಲ್ಲಿ ಪಕ್ಷದ ಅಭ್ಯರ್ಥಿ ಸೋಮ ಶೇಖರ್ ಅವರು ನಾಮ ಪತ್ರ ಸಲ್ಲಿಸಲು ಕುಮಾರಸ್ವಾಮಿ ಜೊತೆಗೂಡಿ ತಾಲೂಕು ಕಚೇರಿಯ ಆವರಣಕ್ಕೆ ಆಗಮಿಸುತ್ತಿದ್ದ ವೇಳೆ ತಾಲೂಕು ಕಚೇರಿಯಿಂದ ಹೊರ ಬಂದ ಎಚ್.ಡಿ.ರೇವಣ್ಣ ಎದುರಾದರು. ಆದರೆ, ಅಣ್ಣನ ಜತೆ ಮಾತನಾಡದೆ ಕುಮಾರಸ್ವಾಮಿಯವರು ಸಾ.ರಾ.ಮಹೇಶ್ ಅವರೊಂದಿಗೆ ಹೊರಟು ಹೋದರು.
ರೇವಣ್ಣ ಕೂಡ ತಮ್ಮನನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಈ ವೇಳೆ, ಇತ್ತ ನಾಮಪತ್ರಕ್ಕೆ ಸಹಿ ಹಾಕಲು ಪಕ್ಕಕ್ಕೆ ತೆರಳಿದ ಸೋಮಶೇಖರ್ ಅವರಿಂದ ನಾಮಪತ್ರವನ್ನೇ ಕಿತ್ತುಕೊಂಡ ರೇವಣ್ಣ, “ಸೋಮ, ಬಾರಯ್ಯ’ ಎನ್ನುತ್ತಾ ತಾಲೂಕು ಕಚೇರಿಯತ್ತ ಹೆಜ್ಜೆ ಹಾಕಿದರು. ನಾಮಪತ್ರ ಸಲ್ಲಿಕೆ ವೇಳೆ ಸೋಮಶೇಖರ್‌ಗೆ ಸಾಥ್ ನೀಡಿದರು.
ಎಚ್ಡಿಕೆಗೆ ತರಾಟೆ: ಈ ಮಧ್ಯೆ, ಪಕ್ಷದ ಅಧಿಕೃತ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಹುಣಸೂರಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿಯವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದಿ.ಕರಿಯಪ್ಪಗೌಡರ ಪುತ್ರ ಗಣೇಶಗೌಡರ ಮನೆಗೆ ಶಾಸಕ ಮಹೇಶ್ ಜತೆ ತೆರಳಿ, ಅವರನ್ನು ಸಮಾಧಾನಪಡಿಸಿದರು. ಗಣೇಶಗೌಡರಿಗೆ ಮುಂದೆ ಉತ್ತಮ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಈ ವೇಳೆ, ಗಣೇಶಗೌಡರ ಬೆಂಬಲಿ ಗರು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
