ಮಲೆನಾಡಲ್ಲಿ ಮುಂದುವರಿದ ಮಳೆಯ ಅಬ್ಬರ

Team Udayavani, Jul 11, 2019, 3:05 AM IST

ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿಯ ಕೆಲವೆಡೆ ಉತ್ತಮ ಮಳೆಯಾಗುತ್ತಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕ್ಯಾಸಲ್‌ರಾಕ್‌ನಲ್ಲಿ ರಾಜ್ಯದಲ್ಲಿಯೇ ಅಧಿಕ, 17 ಸೆಂ.ಮೀ.ಮಳೆ ಸುರಿಯಿತು.

ರಾಜಧಾನಿ ಬೆಂಗಳೂರಿನ ಕೆಲವೆಡೆ ಬುಧವಾರ ಮಧ್ಯಾಹ್ನದ ನಂತರ ಮಳೆಯಾಯಿತು. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಮಲೆನಾಡಿನಲ್ಲಿ ಬುಧವಾರವೂ ಉತ್ತಮ ಮಳೆಯಾಯಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿನ ಮಳೆಯ ಪರಿಣಾಮ ತುಂಗಾ ಹಾಗೂ ಭದ್ರಾ ನದಿಗಳು ಉಕ್ಕೇರಿ ಹರಿಯುತ್ತಿವೆ.

ಮಂಗಳವಾರ ರಾತ್ರಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮೂಡಿಗೆರೆ ತಾಲೂಕಿನ ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮುಳುಗಿ ಕೆಲ ಗಂಟೆಗಳ ಕಾಲ ಹೊರನಾಡಿಗೆ ಸಂಪರ್ಕ ಇಲ್ಲದಂತಾಗಿತ್ತು.

ಗಾಳಿ-ಮಳೆಯಿಂದಾಗಿ ಕಳಸ-ಬಾಳೆಹೊನ್ನೂರು ಮಾರ್ಗದ ಮಧ್ಯೆ ಕೆಲವೆಡೆ ಸಣ್ಣ ಮರಗಳು ರಸ್ತೆ ಮೇಲೆ ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದ್ದು, ತುಂಗಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಗಾಜನೂರು ಅಣೆಕಟ್ಟು ತುಂಬಿದ್ದು, ನದಿಗೆ ನೀರನ್ನು ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 3 ಅಡಿ ನೀರು ಬಂದಿದೆ.

ಈ ಮಧ್ಯೆ, ಶುಕ್ರವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ