ರಾಜ್ಯ ಸರ್ಕಾರ ಕಿತ್ತೂಗೆಯೋದೇ ಯಾತ್ರೆ ಗುರಿ

Team Udayavani, Nov 3, 2017, 7:46 AM IST

ಬೆಂಗಳೂರು: “ದೈವಬಲ ಹಾಗೂ ಜನಬಲದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆಯುತ್ತದೆ ಎಂಬ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನೀಡುವ ಮೂಲಕ ಯಾತ್ರೆ ಆರಂಭಿಸುತ್ತಿದ್ದೇನೆ’. 

ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟನುಡಿ. ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಾತ್ರೆಯ ಮೂಲಕ ಜನರ ಬಳಿಗೆ ಹೋಗುತ್ತಿದ್ದೇವೆ. ಮೋದಿ ಸರ್ಕಾರದ ಅಭಿವೃದ್ಧಿಯಲ್ಲಿ ಕರ್ನಾಟಕವೂ ಆದಷ್ಟು ಬೇಗ ಸೇರಿಕೊಳ್ಳಬೇಕು ಎಂಬ ದೃಢ ಸಂಕಲ್ಪ ಮಾಡಿದ್ದೇನೆ ಎಂದರು. ಯಾತ್ರೆ ಸಲುವಾಗಿ ಹಮ್ಮಿಕೊಂಡಿರುವ ಬೈಕ್‌ ರ್ಯಾಲಿಯನ್ನು ಮಾರ್ಗಮಧ್ಯೆ ತಡೆಯುವ ಮೂಲಕ ಬಿಜೆಪಿಯ ಯುವ ಶಕ್ತಿಯ ಪ್ರದರ್ಶನ ತಡೆಯುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡೋಂಗಿ ರಾಜಕಾರಣಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ, ಇದಕ್ಕೆಲ್ಲಾ ಹೆದರುವುದಿಲ್ಲ. ಯಾತ್ರೆಯ ಸಮಾರೋಪ ಬೆಂಗಳೂರಿನಲ್ಲಿ ನಡೆಯಲಿದ್ದು, ವಿರಾಟ್‌ ಶಕ್ತಿ ಪ್ರದರ್ಶನದ ಮೂಲಕ ಬಿಜೆಪಿಯ ಶಕ್ತಿ ತೋರಿಸುತ್ತೇವೆ ಎಂದರು.

ಕಮಿಷನ್‌ ಏಜೆಂಟ್‌: ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಮುಂದಿದೆ. ಮುಖ್ಯಮಂತ್ರಿಯವರು ಕಮಿಷನ್‌  ಏಜೆಂಟ್‌ ಆಗಿದ್ದಾರೆ. ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಿಬಿಐ ಎಫ್ಐಆರ್‌ ದಾಖಲಿಸಿದ್ದರೂ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಕ್ರಮ ಆಗಿಲ್ಲ. ಮಾನ ಮರ್ಯಾದೆ ಇಲ್ಲದ ಸಿದ್ದರಾಮಯ್ಯ, ಲೋಕಾಯುಕ್ತ ಸಂಸ್ಥೆಯನ್ನು ಬಲಹೀನ ಮಾಡಿ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.  

ಶಾಸಕರಾದ ಯೋಗೇಶ್ವರ್‌, ರಾಜೀವ್‌ ಬಿಜೆಪಿಗೆ
ಇತ್ತೀಚೆಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ ಮತ್ತು ಕುಡಚಿ ಕ್ಷೇತ್ರದ ಬಿಎಸ್‌ಆರ್‌ ಕಾಂಗ್ರೆಸ್‌ ಶಾಸಕ ಪಿ.ರಾಜೀವ್‌ ಬಿಜೆಪಿ ಸೇರಿದ್ದಾರೆ. ಇವರೊಂದಿಗೆ ನಿವೃತ್ತ ನ್ಯಾಯಾಧೀಶಗಿರಯ್ಯ ಪಾಟೀಲ್‌ ಕೂಡ ಬಿಜೆಪಿ ಸೇರಿದರು. ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಇವರು ಬಿಜೆಪಿ ಸೇರಿದರು. ಅಮಿತ್‌ ಶಾ ಮತ್ತು ಯಡಿಯೂರಪ್ಪ ಅವರು ಬಿಜೆಪಿ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಶ್ರೀರಾಮುಲು ಬಾಯಲ್ಲಿ ಏಕಲವ್ಯನಾದ ಬೇಡರ ಕಣ್ಣಪ್ಪ
ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಾಂಸ ತಿಂದ ಬಗ್ಗೆ ಉಂಟಾದ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಬೇಡರ ಕಣ್ಣಪ್ಪ ಈಶ್ವರನಿಗೆ ಮಾಂಸದೂಟ ನೀಡಿರಲಿಲ್ಲವೇ ಎಂದು ಪ್ರತಿಕ್ರಿಯಿಸಿದ್ದ ಬಗ್ಗೆ ಸಂಸದ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸುವಾಗ ಅವರ ಬಾಯಲ್ಲಿ ಬೇಡರ ಕಣ್ಣಪ್ಪನ ಹೆಸರು ಏಕಲವ್ಯ ಎಂದು ಬದಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗಿದ್ದಲ್ಲದೆ, ಏಕಲವ್ಯ ಈಶ್ವರನಿಗೆ ಮಾಂಸ ತಿನ್ನಿಸಲಿಲ್ಲವೇ ಎಂದು ತಮ್ಮನ್ನು ಏಕಲವ್ಯನಿಗೆ ಹೋಲಿಸಿಕೊಂಡಿದ್ದಾರೆ. ನಾನು
ವಾಲ್ಮೀಕಿ ಸಮುದಾಯದವನಾಗಿ ಹೇಳುತ್ತಿದ್ದೇನೆ. ನಿಮಗೆ (ಮುಖ್ಯಮಂತ್ರಿ) ಏಕಲವ್ಯನಷ್ಟು ಭಕ್ತಿ ಇದೆಯೇ? ಏಕಲವ್ಯ ಶಿವನಿಗೆ ತನ್ನ ಕಣ್ಣು ಕೊಟ್ಟಂತೆ ನೀವೂ ಕಣ್ಣು ಕೊಡುತ್ತೀರಾ ಎಂದು ಪ್ರಶ್ನಿಸಿದರು. ಆದರೆ, ತಾವು ಕಣ್ಣಪ್ಪನ ಬದಲು ಏಕಲವ್ಯನ ಹೆಸರು ಹೇಳಿದ್ದೇನೆ ಎಂದು ಶ್ರೀರಾಮುಲು ಅವರಿಗೆ ಕೊನೆಯವರೆಗೂ ಗೊತ್ತಾಗಲೇ ಇಲ್ಲ. ಈ ರೀತಿಯ ಲೋಪಗಳು ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಶಾಸಕ ಅರವಿಂದ ಲಿಂಬಾವಳಿ ಅವರಿಂದಲೂ ಆಯಿತು.

ಬೆಳಿಗ್ಗೆಯಿಂದ ಸಂಚಾರ ದಟ್ಟಣೆ
ಯಾತ್ರೆಗೆ ಬೆಳಗ್ಗೆ 10 ಗಂಟೆಯಿಂದಲೇ ಕಾರ್ಯಕರ್ತರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನಕ್ಕೆ ಬರಲು ಆರಂಭಿಸಿದ್ದು, ಮಧ್ಯಾಹ್ನ ಮೂರು ಗಂಟೆಯ ತನಕವೂ ಬರುತ್ತಲೇ ಇದ್ದರು. ಇದರಿಂದ ಬೆಂಗಳೂರು-ತುಮಕೂರು ರಸ್ತೆ ಬೆಳಗ್ಗೆಯಿಂದ ಸಂಜೆಯ ತನಕ ಟ್ರಾಫಿಕ್‌ ಜಾಮ್‌ ಆಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ ಬಿಜೆಪಿ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ತಲುಪಲು ಆಗಲಿಲ್ಲ. ಗಣ್ಯರ ಓಡಾಟ, ರಥಯಾತ್ರೆ ಕಾರಣದಿಂದ ಕಾರ್ಯಕ್ರಮ ಮುಕ್ತಾಯವಾಗುವ ವೇಳೆ ಮೈದಾನದ ಸುತ್ತ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್‌ ಜಾಮ್‌ ಸಮಸ್ಯೆ ಸಂಜೆ 5 ಗಂಟೆವರೆಗೂ ಮುಂದುವರಿದಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ