ಶ್ರುತಿ ಬೆಳ್ಳಕ್ಕಿ ಬಂಧನಕ್ಕೆ ಖಂಡನೆ

Team Udayavani, Apr 26, 2019, 6:18 AM IST

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳ ನಕಾರಿ ಎನ್ನಲಾದ ಪೋಸ್ಟ್‌ ಮಾಡಿದ ಆರೋಪದಡಿ ಶ್ರುತಿ ಬೆಳ್ಳಕ್ಕಿ ಅವರ ಬಂಧನವನ್ನು ಬಿಜೆಪಿ ಖಂಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದ್ದು, ಗೃಹ ಸಚಿವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಕೋರ್‌ ಕಮಿಟಿ ಸಭೆ ಬಳಿಕ ಗುರುವಾರ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಲಿಂಗಾಯತ ಧರ್ಮವನ್ನು ವಿಭಜಿಸಲು ಯಾರೆಲ್ಲಾ ಸಂಚು ನಡೆಸಿ ದರು, ಅದರ ಹಿನ್ನೆಲೆ, ರಾಜಕೀಯ ದುರುದ್ದೇಶದ ಕುರಿತ ವಿಚಾರವನ್ನು ಶ್ರುತಿ ಬೆಳ್ಳಕ್ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾಷಣ ಮಾಡಿದ್ದರು. ಆ ಕಾರಣಕ್ಕೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ. ಇದು ಅಧಿಕಾರ ದುರುಪಯೋಗ ಮಾತ್ರ ವಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆ ತಂದಿದೆ ಎಂದು ಹೇಳಿದರು.

ಒಂದೆಡೆ ಸಾಹಿತಿ ಭಗವಾನ್‌, ಕೋಟ್ಯಂತರ ಜನರ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಬಹಿ ರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡಿ ನಿಂದಿಸಿದರೂ ಅವರಿಗೆ ಸರ್ಕಾರ ಪೊಲೀಸರ ಭದ್ರತೆ ನೀಡುತ್ತದೆ. ಇನ್ನೊಂದೆಡೆ ಹೆಣ್ಣು ಮಗಳನ್ನು ಜೈಲಿಗೆ ಕಳುಹಿಸುತ್ತದೆ. ಗೃಹ ಸಚಿವ ಎಂ.ಬಿ. ಪಾಟೀಲ್ ಅಧಿಕಾರವನ್ನು ತಮ್ಮ ರಾಜಕೀಯ ವಿರೋಧಿಗಳು, ರಾಜಕೀಯ ಟೀಕೆಗಳ ವಿರುದ್ಧ ಬಳಸುತ್ತಿರುವುದು ಸ್ಪಷ್ಟ ಎಂದರು.

ಮಹೇಶ್‌ ವಿಕ್ರಮ್‌ ಹೆಗ್ಡೆ ಅವರನ್ನು ಸಿಐಡಿ ಪೊಲೀ ಸರು ಬುಧವಾರ ನಾಲ್ಕು ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಗುರುವಾರವೂ ವಿಚಾರಣೆಗೆ‌ ಕರೆದಿದ್ದಾರೆ. ಈ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ, ಅಸಹಿಷ್ಣುತೆ ಎಂದೆಲ್ಲಾ ಬೀದಿಯಲ್ಲಿ ಬೊಬ್ಬೆ ಹೊಡೆದವರ ಕಣ್ಣಿಗೆ ಇದು ಕಾಣುವುದಿಲ್ಲವೇ ಎಂದು ಕಿಡಿ ಕಾರಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ