ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

Team Udayavani, Nov 18, 2019, 3:00 AM IST

ಬೆಂಗಳೂರು/ಹುಬ್ಬಳ್ಳಿ: ಡಿ.5ರಂದು ನಡೆಯಲಿ ರುವ 15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನವೇ ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಹೂರ್ತ ಫಿಕ್ಸ್‌ ಮಾಡಿಕೊಂಡಿದ್ದಾರೆ. ನ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಈವರೆಗೆ 126 ಆಭ್ಯರ್ಥಿಗಳಿಂದ 153 ನಾಮಪತ್ರಗಳು ಸಲ್ಲಿಕೆಯಾಗಿವೆ.

ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಬಿ.ಸಿ.ಪಾಟೀಲ, ಕಾಂಗ್ರೆಸ್‌ನಿಂದ್‌ ಬಿ.ಎಚ್‌.ಬನ್ನಿಕೋಡ ಇಬ್ಬರೂ ತಮ್ಮ ಜನಶಕ್ತಿ ಪ್ರದರ್ಶನದೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು, ರಾಣಿಬೆನ್ನೂರಿನಲ್ಲಿ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಶನಿವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಸೋಮವಾರ ಜನಶಕ್ತಿಯ ಸಮ್ಮುಖದಲ್ಲಿ ಮತ್ತೂಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಅದೇ ರೀತಿ ಬಿಜೆಪಿಯಿಂದ ಅರುಣಕುಮಾರ ಪೂಜಾರ ಬೃಹತ್‌ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ರಾಣಿಬೆನ್ನೂರಿನಲ್ಲಿ ಈವರೆಗೆ 3 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡ, ಪಕ್ಷೇತರರಾಗಿ ಮಣಕೂರಿನ ಹನುಮಂತಪ್ಪ ಕಬ್ಟಾರ ಮತ್ತು ನದಿಹರಳಹಳ್ಳಿಯ ಮಹಾದೇವ ಗೌಡ ಚನ್ನಗೌಡ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ರಮೇಶ, ಲಖನ್‌ ಇಂದು ಕಣಕ್ಕೆ: ಸಹೋದರರ ಸವಾಲಿಗೆ ವೇದಿಕೆಯಾಗಿರುವ ಗೋಕಾಕದಲ್ಲಿ ಬಿಜೆಪಿಯಿಂದ ರಮೇಶ ಜಾರಕಿಹೊಳಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಖನ್‌ ಜಾರಕಿಹೊಳಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಟಾರ ನಾಮಪತ್ರ ಸಲ್ಲಿಸಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಸುನೀಲ ಹೆಗಡೆ, ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ ಸಾಥ್‌ ನೀಡಲಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ 2ನೇ ಬಾರಿಗೆ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾಥ್‌ ನೀಡಲಿದ್ದಾರೆ. ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಅವರು ನಾಮಪತ್ರ ಸಲ್ಲಿಸಲಿದ್ದು, ಆರೋಗ್ಯ ಸಚಿವ ಶ್ರೀರಾಮುಲು, ಸಂಸದರಾದ ಶ್ರೀನಿವಾಸ ಪ್ರಸಾದ್‌, ಪ್ರತಾಪಸಿಂಹ, ವಿರಾಜಪೇಟೆ ಶಾಸಕ ಅಪ್ಪಚ್ಚು ರಂಜನ್‌ ಸಾಥ್‌ ನೀಡಲಿದ್ದಾರೆ. ಇದೇ ವೇಳೆ, ಬಿಎಸ್‌ಪಿಯಿಂದ ಇಮಿ¤ಯಾಜ್‌ಅಹಮದ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸತ್ಯ ಫೌಂಡೇಶನ್‌ ಅಧ್ಯಕ್ಷ ಸತ್ಯಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.

ಹುಣಸೂರಿನಲ್ಲಿ ಈವರೆಗೆ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌ನಿಂದ ನಂದಿ ಅಂಜನಪ್ಪ, ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಚ್ಚೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ, ಅನೇಕರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಸಂಭವವಿದೆ. ನ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ.21, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.5ಕ್ಕೆ ಚುನಾವಣೆ ನಡೆಯಲಿದ್ದು, ಡಿ.9ರಂದು ಮತಗಳ ಎಣಿಕೆ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ