
ಬೇರೆಯವರ ಮನೆಯಲ್ಲಿ ಹಣ ಸಿಕ್ಕರೆ ನಾವು ಹೊಣೆಯಲ್ಲ
Team Udayavani, Aug 6, 2017, 8:45 AM IST

ಬೆಂಗಳೂರು: “ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಬೇರೆಯವರ ಮನೆಯಲ್ಲಿ ಹಣ ದೊರೆತಿದ್ದರೆ, ಅದಕ್ಕೆ ನಾವು ಜವಾಬ್ದಾರರಲ್ಲ. ನಮ್ಮ ಮನೆಯಲ್ಲಿ ದೊರೆತ ವಸ್ತುಗಳಿಗೆ ಸೂಕ್ತ ದಾಖಲೆ ನೀಡುತ್ತೇವೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಹೋದರ, ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿ
ನಂತರ ಮಾತನಾಡಿದ ಅವರು, ತಮ್ಮ ಕುಟುಂಬದವರು ಕಾನೂನು ಪ್ರಕಾರವೇ ವ್ಯವಹಾರ ನಡೆಸುತ್ತೇವೆ. ನಾವ್ಯಾರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ. ಪ್ರತಿ ವರ್ಷವೂ ಆದಾಯ ತೆರಿಗೆ ಕಟ್ಟುತ್ತೇವೆ ಎಂದರು.
ಗುಜರಾತ್ ಶಾಸಕರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಐಟಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಾಗಿದೆ. ತಮ್ಮ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಬಹುದಿತ್ತು. ಆದರೆ, ರೆಸಾರ್ಟ್ ಮೇಲೆ
ದಾಳಿ ಮಾಡಿರುವ ಉದ್ದೇಶ ಏಕೆ ಎಂಬುದು ತಿಳಿಯಲಿಲ್ಲ. ಹೀಗಾಗಿ ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಸ್ಪಷ್ಟವಾಗುತ್ತದೆ.
ತಾವೇನು ಉಗ್ರಗಾಮಿಗಳಲ್ಲ, ನಮ್ಮ ಮನೆಯ ಮುಂದೆ ಸಿಆರ್‌ಪಿಎಫ್ ಯೋಧರನ್ನು ಕರೆಸಿಕೊಂಡು ತಪಾಸಣೆ ನಡೆಸುವ ಅವಶ್ಯಕತೆ ಇರಲಿಲ್ಲ. ಅವರು ನೇರವಾಗಿ ಬಂದು ತಪಾಸಣೆ ನಡೆಸಿದರೂ ತಾವು ಸಹಕರಿಸುತ್ತಿದ್ದೆವು
ಎಂದು ತಿಳಿಸಿದರು.
ತಾವು ಇದೆಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ತಪ್ಪು ಮಾಡಿದರೆ ತಾನೆ ಹೆದರಬೇಕು. ಅವರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಟ್ಟಿದ್ದೇವೆ. ಈಗ ಐಟಿ ಅಧಿಕಾರಿಗಳ ವರದಿಗಾಗಿ ಕಾಯುತ್ತಿದ್ದೇವೆ ಎಂದು
ತಿಳಿಸಿದ್ದಾರೆ.
ದಾಳಿ ವೇಳೆ ತಮಗೆ ಪಕ್ಷ ಹಾಗೂ ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದಾರೆ. ಪಕ್ಷದ ನಾಯಕರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ದಾಳಿ ವಿರುದಟಛಿ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಮಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
