ಲೋಕ ಕಾಣುವ ಕನಸು ಕಮರಿದಾಗ…

Team Udayavani, Jun 12, 2019, 3:05 AM IST

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ಐಎಂಎ ಕಂಪೆನಿ ನೀಡುವ ಲಾಭಾಂಶದ ಹಣದಲ್ಲಿ ಶೀಘ್ರದಲ್ಲಿಯೇ ಕಣ್ಣಿನ ಆಪರೇಶನ್‌ ಮಾಡಿಸಿಕೊಂಡು ಜಗತ್ತು ನೋಡುತ್ತೇನೆ ಎಂದು ಅಂಧರೊಬ್ಬರು ಕಂಡಿದ್ದ ಕನಸು ಕಮರಿಹೋದ ಪ್ರಸಂಗವೂ ಜರುಗಿದೆ…

ಬುಧವಾರ ಐಎಂಎ ಕಂಪೆನಿ ಮುಂದೆ ದಿಕ್ಕುತೋಚದೆ ಕಂಗಾಲಾಗಿ ಕುಳಿತಿದ್ದ ಸುಮಾರು 40 ವರ್ಷ ವಯೋಮಾನದ ಅಂಧ ಬಾಬಾಜಾನ್‌ ಕರುಣಾಜನಕ ಸ್ಥಿತಿಯಿದು. ಐಎಂಎ ಕಂಪೆನಿ ಬಾಗಿಲು ಮುಚ್ಚಿದೆ ಎಂಬ ವಿಚಾರವನ್ನು ಪಕ್ಕದ ಮನೆಯ ನಿವಾಸಿಗಳಿಂದ ಕೇಳಿಸಿಕೊಂಡ ಬಾಬಾಜಾನ್‌, ಅವರಿವರ ಬಳಿ ಬೇಡಿ ಪಡೆದು ಕಟ್ಟಿದ ಹಣ ಹೋಯಿತೇ ಎಂದು ಕಂಗಾಲಾಗಿ ಕಚೇರಿ ಮುಂದೆ ಆಗಮಿಸಿದ್ದರು.

ಕಾಲಿಡಲು ಜಾಗವಿಲ್ಲದೆ ನಿಂತಿದ್ದ ಜನರ ನಡುವೆ ಊರುಗೋಲಿನ ಮೂಲಕ ಜಾಗ ಪಡೆದುಕೊಂಡು, ಐಎಂಎ ಪುನ: ಆರಂಭವಾಗುವುದಿಲ್ಲವೇ ? ನಮ್ಮ ಹಣ ಸಿಗಲ್ವೇ ಎಂದು ಅವರಿವರ ಬಳಿ ಕೇಳುತ್ತಿದ್ದ ಪರಿ ನೆರೆದವರ ಮನ: ಮಿಡಿಯುತ್ತಿತ್ತು.

ಭಾರೀ ಸಂಖ್ಯೆಯಲ್ಲಿ ಏರಿದ್ದ ಜನರನ್ನು ಪೊಲೀಸರು ಕಳುಹಿಸಿದ ಮೇಲೆ ಸಾವಾರಿಸಿಕೊಂಡು ದಿಕ್ಕುತೋಚದೆ ಕಂಗಾಲಾಗಿ ರಸ್ತೆಬದಿ ಅಳುತ್ತಾ ಕುಳಿತುಕೊಂಡಿದ್ದ ಬಾಬಾಜಾನ್‌ರನ್ನು “ಉದಯವಾಣಿ’ ಮಾತನಾಡಿಸಿದಾಗ ಜಗತ್ತು ನೋಡುವ ಕನಸು ಕಮರಿಹೋದ ನೋವಿನ ಕಥೆ ಬಿಚ್ಚಿಟ್ಟರು.

” ಅವರ ಮಾತುಗಳಲ್ಲಿ ಐಎಂಎ ನಂಬಿ ಕೆಟ್ಟೆನಲ್ಲಾ… ಎಂಬ ಸಿಟ್ಟಿತ್ತು. ಹೂಡಿಕೆ ಮಾಡಿದ 2.5 ಲಕ್ಷ ರೂ.ವಾಪಾಸ್‌ ಕೊಡಿಸಿದರೆ ಸಾಕು ಭಗವಂತ ಎಂಬ ಮೊರೆಯಿತ್ತು. ಹಣ ಬರದಿದ್ದರೆ ಕಣ್ಣಿನ ಆಪರೇಶನ್‌ಗೆ ಹಣ ಹೇಗೆ ಹೊಂದಿಸುವುದು ಎಂಬ ಆತಂಕ ಇಣುಕುತ್ತಿತ್ತು’.

ಸುಂದರ ಕುಟುಂಬದ ಜತೆ ಜೀವನ ನಡೆಸುತ್ತಿದ್ದ ಬಾಬಾಜಾನ್‌ಗೆ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಡಯಾಬಿಟಿಸ್‌ ಕಾಯಿಲೆ ಜೀವನದ ಬೆಳಕು ಕಿತ್ತುಕೊಂಡು ಬಿಟ್ಟಿತ್ತು. ಅತಿಯಾದ ಡಯಾಬಿಟಿಸ್‌ನಿಂದ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡರು. ಬದುಕು ನಿಂತ ನೀರಾಗಿಬಿಟ್ಟಿತ್ತು.. ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂಬ ಚಿಂತೆ ಶುರುವಾಗಿತ್ತು.

ಈ ಮಧ್ಯೆ ಕಣ್ಣಿನ ಆಪರೇಶನ್‌ ಮಾಡಿಸಿಕೊಂಡರೆ ದೃಷ್ಟಿ ಬರಲಿದೆ. ಆದರೆ ಅದಕ್ಕೆ ಐದು ಲಕ್ಷ ರೂ. ಖರ್ಚಾಗಲಿದೆ ಎಂಬ ವೈದ್ಯರ ಸಲಹೆ ಅವರಿಗೆ ಚಿಂತೆಗೀಡು ಮಾಡಿತ್ತು. ಕಣ್ಣಿನ ಆಪರೇಶನ್‌ಗೆ ಹಣ ಹೊಂದಿಸಲು ಎರಡು ವರ್ಷ ಹೆಣಗಾಡಿದ್ದೇನೆ. ಅವರಿವರ ಕೈ ಕಾಲು ಹಿಡಿದು ಹಣ ಕೂಡಿಟ್ಟಿದ್ದೆ.

ಕೆಲವೊಮ್ಮೆ ಭಿಕ್ಷೆಯೂ ಬೇಡಿ ಎರಡೂವರೆ ಲಕ್ಷ ರೂ. ಸಂಗ್ರಹಿಸಿದ್ದೆ. ಐಎಂಎನಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶ ನೀಡುತ್ತಾರೆ ಎಂದು ಕೆಲವರು ಹೇಳಿದ್ದರು. ಹೀಗಾಗಿ, ಹಣ ಹೂಡಿಕೆ ಮಾಡಿದರೆ ಸ್ವಲ್ಪ ಐದು ಲಕ್ಷ ರೂ. ಆಗುವತನಕ ಕಾದು ಆಪರೇಶನ್‌ ಮಾಡಿಸಿಕೊಳ್ಳಬಹುದು ಎಂದು ನಿರ್ಧರಿಸಿ ಸಹೋದರ ಹನೀಫ್ ಸಹಾಯ ಪಡೆದು ಎಂಟು ತಿಂಗಳ ಹಿಂದೆ 2.5 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಇದೀಗ ಹಣವೇ ಸಿಗದಂತಾಗಿದೆ ಎಂದು ನೋವು ತೋಡಿಕೊಂಡರು.

ಈಗಾಗಲೇ ಬದುಕು ಅರ್ಧಕತ್ತಲೆಯಾಗಿದೆ. ಈ ಹಣವೂ ಸಿಗದಿದ್ದರೆ ಆಪರೇಶನ್‌ ಆಗುವುದು ದೂರದ ಮಾತಾಗಲಿದೆ ಎಂದು ಗದ್ಗದಿತರಾದ ಬಾಬಾಜಾನ್‌, ದೂರು ನೀಡುತ್ತೇನೆ. ಪೊಲೀಸರು ತನಿಖೆ ನಡೆಸಿ ಹಣ ವಾಪಾಸ್‌ ಬಂದರೆ ಸಾಕು ಎಂದು ನಿಟ್ಟುಸಿರುಬಿಟ್ಟರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ