ಅಮೆರಿಕದ ಸೈಬರ್‌ ವಾರ್‌

ಡ್ರೋನ್‌ ಉರುಳಿಸಿದ ಇರಾನ್‌ ಮೇಲೆ ಪ್ರತೀಕಾರ

Team Udayavani, Jun 24, 2019, 6:00 AM IST

ಸಾಂದರ್ಭಿಕ ಚಿತ್ರ.

ವಾಷಿಂಗ್ಟನ್‌: ಡ್ರೋನ್‌ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ವಿರುದ್ಧ ಅಮೆರಿಕ ಸೈಬರ್‌ ದಾಳಿ ನಡೆಸಿದೆ. ಕಳೆದ ವಾರ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಗಡಿ ಭಾಗದಲ್ಲಿ ಇರಾನ್‌ ಸೇನೆ ಹೊಡೆದುರುಳಿಸಿದ್ದು, ಉಭಯ ದೇಶಗಳ ಮಧ್ಯೆ ಬಿಕ್ಕಟ್ಟು ತೀವ್ರಗೊಳ್ಳಲು ಕಾರಣವಾಗಿದೆ. ಇದಕ್ಕೆ ಪ್ರತೀಕಾರವಾಗಿ ಮೊದಲು ಕ್ಷಿಪಣಿ ದಾಳಿ ನಡೆಸಲು ಅಮೆರಿಕ ಸಜ್ಜಾಗಿತ್ತಾದರೂ, ಕೊನೆ ಕ್ಷಣದಲ್ಲಿ ಅದನ್ನು ಕೈಬಿಟ್ಟಿತ್ತು. ಆದರೆ ಈಗ ಇರಾನ್‌ನ ಕ್ಷಿಪಣಿ ನಿಯಂತ್ರಣಾ ವ್ಯವಸ್ಥೆಯ ಮೇಲೆ ಸೈಬರ್‌ ದಾಳಿ ನಡೆಸಿದೆ. ಕ್ಷಿಪಣಿಗಳು ಹಾಗೂ ರಾಕೆಟ್‌ಗಳನ್ನು ನಿಯಂತ್ರಿಸುವ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಗುಪ್ತಚರ ದಳದ ಮೂಲಗಳು ತಿಳಿಸಿವೆ.

ಈ ರೀತಿಯ ದಾಳಿ ನಡೆಸಲು ಅಮೆರಿಕ ಕೆಲವು ವಾರಗಳಿಂದ ಪೂರ್ವತಯಾರಿ ನಡೆಸಿತ್ತು. ಕೆಲವು ದಿನಗಳ ಹಿಂದೆ ಹೊರ್ಮುಜ್‌ ಪ್ರದೇಶದಲ್ಲಿ ತೈಲ ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ದಾಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಿವರವನ್ನು ಅಮೆರಿಕ ಪ್ರಕಟಿಸಿಲ್ಲ.

ಇರಾನ್‌ಗೆ ಎಚ್ಚರಿಕೆ
ಕೊನೆಯ ಕ್ಷಣದಲ್ಲಿ ಇರಾನ್‌ ಮೇಲೆ ಕ್ಷಿಪಣಿ ದಾಳಿ ನಡೆಸುವ ನಿರ್ಧಾರ ಹಿಂತೆಗೆದುಕೊಂಡಿದ್ದನ್ನು ಟ್ರಂಪ್‌ ಬಲಹೀನತೆ ಎಂದು ಇರಾನ್‌ ಪರಿಗಣಿಸಬಾರದು. ನಮ್ಮ ಸೇನೆಯು ದಾಳಿಗೆ ಸಶಕ್ತ ಮತ್ತು ಸನ್ನದ್ಧವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ