ಭಾರತ-ಥೈಲೆಂಡ್‌ ಹೊಸ ಅಭಿವೃದ್ಧಿ ಶಕೆಗೆ ಬದ್ಧ : ಮೋದಿ

"ಸ್ವಸ್ಡೀ ಮೋದಿ' ಕಾರ್ಯಕ್ರಮದಲ್ಲಿ ಮೋದಿ ಮಾತು

Team Udayavani, Nov 2, 2019, 7:38 PM IST

ಆಸಿಯಾನ್‌ ಶೃಂಗಕ್ಕಾಗಿ ಥೈಲೆಂಡ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಅನಿವಾಸಿ ಭಾರತೀಯರನ್ನುದ್ದೇಶಿಸಿ ಬ್ಯಾಂಕಾಕ್‌ನಲ್ಲಿ ಮಾತನಾಡಿದರು. “ಸ್ವಸ್ಡೀ ಮೋದಿ’ ಹೆಸರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಹಾಜರಿದ್ದು ಪ್ರಧಾನಿ ಅವರ ಭಾಷಣವನ್ನು ಆಲಿಸಿದರು.

ಭಾರತ-ಥೈಲೆಂಡ್‌ ಭಾವ ಒಂದೇ
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಅನಿವಾಸಿ ಭಾರತೀಯರು ಈ ಸ್ವರ್ಣ ಭೂಮಿಯನ್ನು ಇನ್ನಷ್ಟು ಸುಂದರವಾಗಿಸಿದ್ದಾರೆ. ಇಲ್ಲಿನ ಪ್ರತಿಯೊಂದು ವಿಚಾರದಲ್ಲಿ ಭಾರತೀಯತೆ ಇದೆ. ಥಾಯ್‌ ರಾಜಮನೆತನದೊಂದಿಗೆ ಭಾರತಕ್ಕೆ ಉತ್ತಮ ಸಂಬಂಧವಿದೆ. ಎರಡೂ ದೇಶಗಳು ಭಾವಗಳ ಮೂಲಕ ಒಂದಾಗಿವೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಭಾರತಕ್ಕೆ ಬಂದವರಿಗೆಲ್ಲ ಕಾಣುವಷ್ಟು ಅಭಿವೃದ್ಧಿಯಾಗಿರುವುದು ಈಗ ಕಾಣುತ್ತಿದೆ. ಈಗ ಭಾರತದ ಸಂಸತ್ತಿನಲ್ಲಿರುವ ಮಹಿಳೆಯರ ಪ್ರಾತಿನಿಧ್ಯ ಸ್ವಾತಂತ್ರಾéನಂತರದಲ್ಲೇ ಅತಿ ಹೆಚ್ಚಿದ್ದು, ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಬಹುಮತದ ಸರಕಾರ
ಕಳೆದ 60 ವರ್ಷಗಳಲ್ಲೇ ಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಸರಕಾರ ಅಧಿಕಾರಕ್ಕೆ ಬಂದಿದೆ. ಪರಿಹರಿಸಲು ಸಾಧ್ಯವೇ ಇಲ್ಲ ಎನ್ನುವ ಸವಾಲುಗಳನ್ನು ನಾವು ಮೆಟ್ಟಿ ನಿಂತಿದ್ದೇವೆ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಭಾರತ ಏನೆಲ್ಲ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಥೈಲೆಂಡ್‌ನ‌ಲ್ಲಿರುವ ಭಾರತೀಯರು ಅರಿತಿದ್ದಾರೆ ಎಂದರು.

ಗಾಂಧಿ 150ನೇ ಜನ್ಮ ವರ್ಷಾಚರಣೆ ಬಗ್ಗೆಯೂ ಮಾತನಾಡಿದ ಅವರು ಈ ವೇಳೆ ಬಯಲು ಮುಕ್ತ ಶೌಚಾಲಯ, ಹೊಗೆ ಮುಕ್ತ ಅಡುಗೆಯ ನಿರ್ಣಯ ಮಾಡಿಕೊಂಡಿದ್ದೇವೆ. ಆಯುಷ್ಮಾನ್‌ ಭಾರತ್‌ ಮೂಲಕ ಆರೋಗ್ಯ ಕೋಟ್ಯಂತರ ಮಂದಿಗೆ ಯೋಜನೆ ನೆರವು ದೊರಕುತ್ತಿದೆ ಎಂದು ತಮ್ಮ ಸರಕಾರ ಕೈಗೊಂಡ ಯೋಜನೆ ಬಗ್ಗೆ ಒಂದಷ್ಟು ವಿಚಾರಗಳನ್ನು ಪ್ರಸ್ತಾವಿಸಿದರು. ಬುದ್ಧ ಸರ್ಕ್ನೂಟ್‌ ಮೂಲಕ ಬೌದ್ಧ ಶ್ರದ್ಧಾಕೇಂದ್ರಗಳನ್ನು ಸಂಪರ್ಕಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಪೂರ್ವ ಏಷ್ಯಾಕ್ಕೆ ಹೆಬ್ಟಾಗಿಲಾಗಿ ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಆಸಿಯಾನ್‌ ಸಂಬಂಧ ವೃದ್ಧಿ
ಇಂದು ಭಾರತ-ಮ್ಯಾನ್ಮಾರ್‌-ಥೈಲೆಂಡ್‌ ನಡುವಿನ ಅಪೂರ್ವ ಸಂಬಂಧ ಈ ಭಾಗದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ನಮ್ಮ ಮೂರು ದೇಶಗಳ ಮಧ್ಯೆ ಹೈವೇ ಯೋಜನೆ ಪೂರ್ಣವಾದರೆ ಇದು ಅಪೂರ್ವ ಕೊಡುಗೆ ನೀಡಲಿದೆ. ನಾವು ಥೈಲೆಂಡ್‌ನೊಂದಿಗೆ ಪ್ರಾಚೀನ ಸಂಸ್ಕೃತಿಯೊಂದಿಗೆ ಆಧುನಿಕ ರೀತಿಯ ಅಭಿವೃದ್ಧಿ ಕೇಂದ್ರಿತವಾದ ಉದ್ದೇಶವನ್ನಿಟ್ಟುಕೊಂಡು ಪರಸ್ಪರ ಹೆಜ್ಜೆ ಹಾಕುತ್ತಿದ್ದೇವೆ. ನಮ್ಮ ಆಕ್ಟ್ ಈಸ್ಟ್‌ ಪಾಲಿಸಿ ಮತ್ತು ಥೈಲೆಂಡ್‌ನ‌ ಆಕ್ಟ್ ವೆಸ್ಟ್‌ ಪಾಲಿಸಿ ನಮ್ಮನ್ನು ಇನ್ನಷ್ಟು ಹತ್ತಿರವನ್ನಾಗಿಸಿದೆ. ನಮ್ಮ ಐಐಟಿಗಳಲ್ಲಿ ಆಸಿಯಾನ್‌ ದೇಶಗಳ 1 ಸಾವಿರ ವಿದ್ಯಾರ್ಥಿಗಳು ಪೋಸ್ಟ್‌ ಡಾಕ್ಟರಲ್‌ ಫೆಲೋಶಿಪ್‌ಗ್ಳ ಮೂಲಕ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲ ಕಲ್ಪಿಸಲಾಗಿದೆ. ಆಸಿಯಾನ್‌ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಗೆ ಹೆಚ್ಚಾಗಿ ಶ್ರಮಿಸಲಾಗುತ್ತಿದೆ ಎಂದೂ ಅವರು ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಕುರಿತಾಗಿ ಹೇಳಿದರು.

ಭಯೋತ್ಪಾದನೆ 370 ರದ್ಧತಿ ಬಗ್ಗೆ ಪರೋಕ್ಷವಾಗಿ ಪ್ರಧಾನಿ ಮೋದಿ ಅವರು ಭಾಷಣದಲ್ಲಿ ಪ್ರಸ್ತಾವ ಮಾಡಿದ್ದು, ಈ ವೇಳೆ ಪ್ರೇಕ್ಷಕರು ಎದ್ದು ನಿಂತಿ ಕರತಾಡನ ಮಾಡಿದ್ದು ವಿಶೇಷವಾಗಿತ್ತು. ಇದಕ್ಕೆ ಪ್ರತಿಯಾಗಿ ಮೋದಿ ಅವರು ಧನ್ಯವಾದ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ