ಬೀಜಿಂಗ್‌: ಚಾರ್ಜಿಂಗ್‌ನಲ್ಲಿದ್ದ E-scooter ಸ್ಫೋಟ, ತಂದೆ,ಮಗಳು ಪಾರು

Team Udayavani, Aug 3, 2018, 5:36 PM IST

ಬೀಜಿಂಗ್‌ : ಇಲ್ಲಿನ ಅಪಾರ್ಟ್‌ಮೆಂಟ್‌ ಒಂದರ ಮನೆಯವರು ತಾವು ಹೊಸದಾಗಿ ಖರೀದಿಸಿದ್ದ ಇ-ಸ್ಕೂಟರ್‌ ಚಾರ್ಜ್‌ ಮಾಡಲು ಇಟ್ಟ ಸಂದರ್ಭದಲ್ಲಿ ಅದು ಸ್ಫೋಟಗೊಂಡ ಘಟನೆ ನಡೆದಿದೆ. 

ಸ್ಫೋಟ ನಡೆದಾಗ ಮನೆಯಲ್ಲಿದ್ದ  ತಂದೆ ಮತ್ತು ಮಗಳು ಪವಾಡ ಸದೃಶವಾಗಿ ಯಾವುದೇ ಗಾಯಗಳಿಲ್ಲದ ಪಾರಾದರೆಂದು ಸ್ಥಳೀಯ ಬೀಜಿಂಗ್‌ ಮಾರ್ನಿಂಗ್‌ ಫೋಸ್ಟ್‌ ವರದಿ ಮಾಡಿದೆ. 

ಇ-ಸ್ಕೂಟರ್‌ ಸ್ಫೋಟಗೊಂಡ ಇಡಿಯ ಪ್ರಕರಣವು ಅಪಾರ್ಟ್‌ಮೆಂಟಿನ ಭದ್ರತಾ ವ್ಯವಸ್ಥೆಯ ಕ್ಯಾಮೆರಾದಲ್ಲಿ ದಾಖಲಾಗಿದ್ದು ಚೀನದ ಅಗ್ನಿಶಾಮಕ ದಳದವರು ಆ ಚಿತ್ರಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಚಾರ್ಜ್‌ ಗೆ ಇಟ್ಟಿದ್ದ  ಇ-ಸ್ಕೂಟರ್‌ ನಿಂದ ಹೊಗೆ ಬರಲು ಆರಂಭವಾದಾಗ ತಂದೆ ಮತ್ತು ಮಗಳು ಮನೆಯ ಲಿವಿಂಗ್‌ ರೂಮಿನಲ್ಲೇ ಇದ್ದರು. ಹೊಗೆ ದಟ್ಟವಾಗುತ್ತಿದ್ದಂತೆಯೇ ತಂದೆ ಸ್ಕೂಟರ್‌ನ ಪ್ಲಗ್‌ ತೆಗೆಯಲು ಧಾವಿಸಿದರು. ಆದರೆ ಸಾಧ್ಯವಾಗದಾಗ ಮಗಳ ಸಹಿತ ಸುರಕ್ಷಿತವಾಗಿ ಹೊರಗೆ ಧಾವಿಸಿ ಬಂದು ಬಚಾವಾದರು. ಒಡನೆಯೇ ಅಪಾರ್ಟ್‌ಮೆಂಟ್‌ ಕಟ್ಟಡದ ಸುರಕ್ಷಾ ಸಿಬಂದಿಗಳು ಧಾವಿಸಿ ಬಂದು ಬೆಂಕಿ ನಂದಿಸಲು ಮುಂದಾದರು. 

ಸ್ಫೋಟಗೊಂಡ ಇ-ಸ್ಕೂಟರನ್ನು ಮನೆಯವರು ಎರಡು ವಾರದ ಹಿಂದಷ್ಟೇ ಆನ್‌ಲೈನ್‌ ನಲ್ಲಿ 1,780 ಯುವಾನ್‌ (17,800 ರೂ.) ತೆತ್ತು ಖರೀದಿಸಿದ್ದರು. ಇದನ್ನು ಅವರು ಎರಡನೇ ಬಾರಿಯಷ್ಟೇ ಚಾರ್ಜ್‌ ಮಾಡುತ್ತಿದ್ದರು. 

ಮನೆಯವರೀಗ ಸ್ಕೂಟರ್‌ ಉತ್ಪಾದಿಸಿದ ಕಂಪೆನಿ ವಿರುದ್ದ ದೂರು ದಾಖಲಿಸಿದ್ದು ತಮಗೆ 20,000 ಯುವಾನ್‌ (2 ಲಕ್ಷ ರೂ.) ನಷ್ಟವಾಗಿದೆ ಎಂದು ಪರಿಹಾರ ಕೋರಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ