ಬಾಂಬ್‌ ದಾಳಿಗೆ ನಡುಗಿದ ಲಂಕಾ : 8 ಕಡೆ ಸ್ಪೋಟ ; 162 ಸಾವು

ಓರ್ವ ಶಂಕಿತ ವಶಕ್ಕೆ ; ದ್ವೀಪ ರಾಷ್ಟ್ರಾದ್ಯಂತ ಕರ್ಫ್ಯೂ ; ಸೋಷಿಯಲ್‌ ಮೀಡಿಯಾ ಸೇವೆ ಬ್ಲಾಕ್‌

Team Udayavani, Apr 21, 2019, 3:51 PM IST

ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಕೊಲೊಂಬೋ: ಆದಿತ್ಯವಾರ ಬೆಳಗ್ಗಿನಿಂದ ಶ್ರೀಲಂಕಾ ರಾಜಧಾನಿ ಕೊಲಂಬೋ ಸುತ್ತಮುತ್ತ ಎಂಟು ಕಡೆಗಳಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದ್ದು ಇದುವರೆಗೂ 162 ಜನರು ಈ ದಾಳಿಗೆ ಪ್ರಾಣ ತೆತ್ತಿದ್ದಾರೆ. ದುರ್ಘ‌ಟನೆಯಲ್ಲಿ 400ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇವರಲ್ಲಿ ವಿದೇಶಿಯರೂ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲುಗಳು ಸೇರಿದಂತೆ ಒಟ್ಟು ಆರು ಕಡೆ ಸ್ಪೋಟ ಸಂಭವಿಸಿದ ಬಳಿಕ ಇದೀಗ ಮತ್ತೆರಡು ಕಡೆ ಬಾಂಬ್‌ ಸ್ಪೋಟ ನಡೆದಿರುವ ಕುರಿತಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲಿ ಒಂದು ಸ್ಪೋಟ ದೆಹಿವಲಾ ಪ್ರದೇಶದಲ್ಲಿ ನಡೆದಿದ್ದರೆ ಇನ್ನೊಂದು ಸ್ಪೋಟ ಡೆಮಟಗೋಡಾ ಪ್ರದೇಶದಲ್ಲಿ ನಡೆದಿದೆ.
ಸ್ಪೋಟ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಎರಡು ಸ್ಪೋಟಗಳಲ್ಲಿ ಒಂದು ಪ್ರಾಣಿ ಸಂಗ್ರಹಾಲಯ ಉದ್ಯಾನದಲ್ಲಿ ನಡೆದಿದ್ದರೆ ಇನ್ನೊಂದು ವಸತಿ ಸಮುಚ್ಛಯ ಪ್ರದೇಶದಲ್ಲಿ ನಡೆದಿದೆ. ಆದಿತ್ಯವಾರ ಸಾಯಂಕಾಲ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ರಾಷ್ಟ್ರಾಧ್ಯಕ್ಷರ ಕಾರ್ಯದರ್ಶಿಯವರು ಸೋಮವಾರ ಮತ್ತು ಮಂಗಳವಾರಗಳಂದು ಸರಕಾರಿ ರಜೆ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ಬುಕ್‌ ಮತ್ತು ವಾಟ್ಸ್ಯಾಪ್‌ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ