ಚುನಾವಣೆ ಸುರಕ್ಷತೆಗೆ ಬದ್ಧ

Team Udayavani, Apr 12, 2018, 6:00 AM IST

ವಾಷಿಂಗ್ಟನ್‌: ಭಾರತ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿನ ಚುನಾವಣೆಯಲ್ಲಿ ಭದ್ರತೆಗೆ ನಾವು ಬದ್ಧವಾಗಿದ್ದೇವೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ. ಚುನಾವಣಾ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್‌ ಅನಾಲಿಟಿಕಾ ಹಗರಣಕ್ಕೆ ಸಂಬಂಧಿಸಿ ಅಮೆರಿಕದ ಸಂಸತ್ತಿಗೆ ವಿವರಣೆ ನೀಡಿದ ಮಾರ್ಕ್‌, ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆಯ ವೇಳೆ ವಿದೇಶಿ ಹಸ್ತಕ್ಷೇಪ ಹಾಗೂ ದತ್ತಾಂಶ ಗೌಪ್ಯತೆಯ ವಿಚಾರವನ್ನು ಚರ್ಚಿಸಲಾಗಿದೆ ಎಂದಿದ್ದಾರೆ. ಈ ವಿಚಾರಗಳನ್ನು ಕಂಪೆನಿ ಅತ್ಯಂತ ಪ್ರಮುಖವಾಗಿ ಪರಿಗಣಿಸಿದೆ ಮತ್ತು ನಾವು ಈ ನಿಟ್ಟಿನಲ್ಲಿ ಮಹತ್ವದ ಜವಾಬ್ದಾರಿ ಹೊಂದಿದ್ದೇವೆ ಎಂದು ಮಾರ್ಕ್‌ ಹೇಳಿದ್ದಾರೆ.

ಈ ಮಧ್ಯೆ ನನ್ನ ದತ್ತಾಂಶವನ್ನೂ ಕೇಂಬ್ರಿಜ್‌ ಅನಾಲಿಟಿಕಾಗೆ ನೀಡಲಾಗಿತ್ತು ಎಂಬ ಅಚ್ಚರಿಯ ಅಂಶವನ್ನೂ ಸಂಸತ್ತಿನಲ್ಲಿ ಹೇಳಿಕೆ ನೀಡುವಾಗ ಮಾರ್ಕ್‌ ಬಹಿರಂಗಗೊಳಿಸಿದ್ದಾರೆ. ಚುನಾವಣೆ ವಿಶ್ಲೇಷಣೆಗಾಗಿ ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಕೇಂಬ್ರಿಜ್‌ ಅನಾಲಿಟಿಕಾ ಬಳಸಿಕೊಂಡಿದ್ದನ್ನು ತಡೆಯಲು ಫೇಸ್‌ಬುಕ್‌ಗೆ ಸಾಧ್ಯವಾಗಿಲ್ಲ ಎಂಬುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಅಲ್ಲದೆ ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಅನುಮತಿ ಇಲ್ಲದೇ ಇತರ ಉದ್ದೇಶಗಳಿಗೆ ಕೇಂಬ್ರಿಜ್‌ ಅನಾಲಿಟಿಕಾ ಬಳಸಿಕೊಂಡಿತ್ತು.

ರಾಹುಲ್‌ ಕ್ಷಮೆ ಕೇಳಬೇಕು ಎಂದ ಪ್ರಸಾದ್‌: ಕೇಂಬ್ರಿಜ್‌ ಅನಾಲಿಟಿಕಾದ ದತ್ತಾಂಶವನ್ನು ಬಳಸಿ ಚುನಾವಣಾ ಫ‌ಲಿತಾಂಶವನ್ನು ಬದಲಿಸಲು ಪ್ರಯತ್ನಿಸಿದ್ದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವಲ್ಲಿ ಕೇಂಬ್ರಿಜ್‌ ಅನಾಲಿಟಿಕಾ ಪಾತ್ರ ಸ್ಪಷ್ಟವಾಗಿದೆ. ಹೀಗಾಗಿ ರಾಹುಲ್‌ ಕ್ಷಮೆ ಕೇಳಬೇಕು ಮತ್ತು ಇನ್ನು ಮತದಾರರ ದತ್ತಾಂಶ ಬದಲಿಸುವುದಿಲ್ಲ ಮತ್ತು ಸಮಾಜವನ್ನು ಒಡೆಯುವುದಿಲ್ಲ ಎಂದು ಖಚಿತಪಡಿಸಬೇಕು ಎಂದೂ ಅವರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ