ಫೇಸ್‌ ಬುಕ್‌ ಆರಂಭಿಸಲಿದೆ ಬಿಟ್‌ ಕಾಯಿನ್‌ ರೀತಿಯ ಸ್ವಂತ ಡಿಜಿಟಲ್‌ ಕರೆನ್ಸಿ ಲಿಬ್ರಾ !

Team Udayavani, Jun 18, 2019, 3:49 PM IST

ಸ್ಯಾನ್‌ಫ್ರಾನ್ಸಿಸ್ಕೋ : ಈಗಾಗಲೇ ತನ್ನ ಎರಡು ಬಿಲಿಯಕ್ಕೂ ಅಧಿಕ ಬಳಕೆದಾರರಿಗೆ ದಿನನಿತ್ಯದ ಸಂಪರ್ಕ-ಸಂವಹನ ವೇದಿಕೆಯನ್ನು ಕಲ್ಪಿಸಿರುವ ಫೇಸ್‌ ಬುಕ್‌ ಈಗಿನ್ನು ಶೀಘ್ರವೇ ತನ್ನ ಬಳಕೆದಾರರಿಗಾಗಿ ಬಿಟ್‌ ಕಾಯಿನ್‌ ರೀತಿಯ ‘ಲಿಬ್ರಾ’ ನಾಮಾಂಕಿತ ಸ್ವಂತ ಕರೆನ್ಸಿಯನ್ನು ಆರಂಭಿಸಲಿದೆ.

ವಿವಾದಾತ್ಮಕ ಬಿಟ್‌ ಕಾಯಿನ್‌ ಕ್ರಿಪ್ಟೋ ಕರೆನ್ಸಿಯ ರೀತಿಯಲ್ಲೇ ಇರುವ ಲಿಬ್ರಾ ಹೆಸರಿನ ಹೊಸ ಡಿಜಿಟಲ್‌ ಕರೆನ್ಸಿಯನ್ನು ಸೃಷ್ಟಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಮಾಜಿಕ ಜಾಲ ತಾಣದ ದಿಗ್ಗಜ ಫೇಸ್‌ ಬುಕ್‌ ಅನಾವರಣಗೊಳಿಸಿದೆ.

ಲಿಬ್ರಾ ಡಿಜಿಟಲ್‌ ಕರೆನ್ಸಿಯನ್ನು ಸೃಷ್ಟಿಸುವಲ್ಲಿ ಫೇಸ್‌ ಬುಕ್‌ ಜತೆಗೆ ಪೇ ಪಾಲ್‌, ಉಬರ್‌, Spotify, ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಕೈಜೋಡಿಸಿವೆ.

ಆದರೆ ಲಿಬ್ರಾ ಡಿಜಿಟಲ್‌ ಕರೆನ್ಸಿಯು, ಬಿಟ್‌ ಕಾಯಿನ್‌ ಮತ್ತಿರ ಬಗೆಯ ಕ್ರಿಪ್ಟೋ ಕರೆನ್ಸಿಗಳ ಹಾಗೆ, ಜಾಗತಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ, ರಾಷ್ಟ್ರೀಯ ಕರೆನ್ಸಿಗಳಿಗೆ ಮತ್ತು ಬಳಕೆದಾರರ ಖಾಸಗಿತನಕ್ಕೆ ಭಾರೀ ದೊಡ್ಡ ಸವಾಲು ಮತ್ತು ಸಮಸ್ಯೆಯನ್ನು ಒಡ್ಡಲಿದೆ ಎಂದು ತಿಳಿಯಲಾಗಿದೆ.

ಬಳಕೆದಾರರ ಖಾಸಗಿತನ ಉಲ್ಲಂಘನೆಗೆ ಸಂಬಂಧಿಸಿದಂತೆ ಫೇಸ್‌ ಬುಕ್‌ ಈಗಾಗಲೇ ಇತರ ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳೊಂದಿಗೆ ಅಮೆರಿಕದ ಫೆಡರಲ್‌ ತನಿಖೆಗೆ ಗುರಿಯಾಗಿದೆ. ಮಾತ್ರವಲ್ಲದೆ ಅಮೆರಿಕದ ಸಂಸತ್ತಿನಿಂದ ಹೊಸ ಆ್ಯಂಟಿ ಟ್ರಸ್ಟ್‌ ತನಿಖೆಯನ್ನು ಕೂಡ ಎದುರಿಸುತ್ತಿದೆ.

ಇದೇ ವೇಳೆ ಭಾರತದಲ್ಲಿ ಬಿಟ್‌ ಕಾಯಿನ್‌ ಮತ್ತು ಆ ರೀತಿಯ ಡಿಜಿಟಲ್‌ ಕರೆನ್ಸಿ ಹೊಂದುವುದು, ಮಾರುವುದು, ಖರೀದಿಸುವುದು, ವರ್ಗಾಯಿಸುವುದು ಮತ್ತು ಆದರ ಮೂಲಕ ವಹಿವಾಟು ನಡೆಸುವ ಎಲ್ಲ ರೀತಿಯ ಕೃತ್ಯಗಳನ್ನು ಭಾರತ ಸರಕಾರ ಕಾನೂನು ಬಾಹಿರವೆಂದು ಪರಿಗಣಿಸಿ ಈ ಅಪರಾಧ ಎಸಗುವವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಉದ್ದೇಶಿಸಿದೆ.

ಫೇಸ್‌ ಬುಕ್‌ ನ ಲಿಬ್ರಾ ಡಿಜಿಟಲ್‌ ಕರೆನ್ಸಿ ಮುಂದಿನ ಆರರಿಂದ 12 ತಿಂಗಳ ಒಳಗೆ ಆರಂಭಗೊಳ್ಳಲಿದೆ. ಸುಮಾರು ಎರಡು ಡಜನ್‌ ಪಾಲುದಾರ ಸಂಸ್ಥೆಗಳು ಲಿಬ್ರಾ ಗೆ ಹಣಕಾಸು ಬೆಂಬಲ ಒದಗಿಸಲಿವೆ.

ಪ್ರಕೃತ ಜಾಗತಿಕ ಹಣಕಾಸು ವರ್ಗಾವಣೆ ವಹಿವಾಟು ನಡೆಸುತ್ತಿರುವ ವೆಸ್ಟ್‌ರ್ನ್ ಯೂನಿಯನ್‌ ರೀತಿಯಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಲಿಬ್ರಾ ಮೂಲಕ ಹಣ ವರ್ಗಾವಣೆ ಸೌಕರ್ಯವನ್ನು ಫೇಸ್‌ ಬುಕ್‌ ಒದಗಿಸಲಿದೆ.

ಇದಕ್ಕಾಗಿ ಫೇಸ್‌ ಬುಕ್‌ ತನ್ನ ಹಾಲಿ ಮತ್ತು ಭವಿಷ್ಯತ್ತಿನ ಪಾಲುದಾರ ಸಂಸ್ಥೆಗಳಿಂದ 1 ಶತಕೋಟಿ ಡಾಲರ್‌ ಹಣವನ್ನು ಬೆಂಬಲ ನಿಧಿಯಾಗಿ ಎತ್ತುವ ವಿಶ್ವಾಸ ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ