ಅಮೆರಿಕದ 41 ನೇ ಅಧ್ಯಕ್ಷ ಜಾರ್ಜ್ H ವಾಕರ್ ಬುಷ್ ಇನ್ನಿಲ್ಲ
Team Udayavani, Dec 1, 2018, 11:03 AM IST
ವಾಷಿಂಗ್ಟನ್: ಅಮೆರಿಕದ 41 ನೇ ಅಧ್ಯಕ್ಷರಾಗಿದ್ದ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರು ಶುಕ್ರವಾರ ರಾತ್ರಿ ನಿಧನಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ತಂದೆಯ ನಿಧನದ ವಾರ್ತೆಯನ್ನು ಪುತ್ರ ಅಮೆರಿಕದ 43 ನೇ ಅಧ್ಯಕ್ಷರಾಗಿದ್ದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಪ್ರಕಟಣೆಯಲ್ಲಿ ಹೊರಡಿಸಿದ್ದಾರೆ. ಆದರ್ಶ ಪ್ರಾಯರಾಗಿದ್ದ ನಮ್ಮ ತಂದೆಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 41 ನೇ ಅಧ್ಯಕ್ಷೀಯ ಅವಧಿಯಲ್ಲಿ ಅವರ ಸೇವೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಬರೆದಿದ್ದಾರೆ.
ರಿಪಬ್ಲಿಕ್ ಪಕ್ಷದ ನಾಯಕರಾಗಿದ್ದ ಜಾರ್ಜ್ ಹರ್ಬರ್ಟ್ ಅವರು 1988 ರಿಂದ 1993 ರ ವರೆಗೆ 5 ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗಾಲಿಚಕ್ರವನ್ನು ಅವಲಂಬಿಸಿಕೊಂಡಿದ್ದರು.ಕೆಲ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ರಷ್ಯಾದೊಂದಿಗೆ ನಡೆಯುತ್ತಿದ್ದ 4 ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
1941 ರಲ್ಲಿ ನಡೆದ 2 ನೇ ವಿಶ್ವ ಯುದ್ಧದ ವೇಳೆ ಜಾರ್ಜ್ ಹರ್ಬರ್ಟ್ ಅಮೆರಿದ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಆ ಕಾಲದಲ್ಲಿ ಅಂತ್ಯಂತ ಕಿರಿಯ ನೌಕಾ ವಿಮಾನ ಚಾಲಕ ಎಬ್ಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಜಾರ್ಜ್ ಹರ್ಬರ್ಟ್ ಅವರು ಜಾರ್ಜ್ ಡಬ್ಲ್ಯೂ ಬುಷ್ ಸೇರಿದಂತೆ 6 ಮಂದಿ ಮಕ್ಕಳನ್ನು ಅಗಲಿದ್ದಾರೆ.