ಹಾಂಕಾಂಗ್‌ನಲ್ಲಿ ಸೇನೆಗೂ ಬಗ್ಗದ ಯುವಜನ; ಉದ್ರಿಕ್ತರಿಂದ ಬಿಲ್ಲು-ಬಾಣಗಳ ದಾಳಿ

Team Udayavani, Nov 18, 2019, 12:52 AM IST

ಹಾಂಕಾಂಗ್‌: ಪ್ರಜಾಪ್ರಭುತ್ವಕ್ಕಾಗಿ ಕಳೆದ 5 ತಿಂಗಳಿಂದ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಯುವಜನತೆಯ ಪ್ರತಿಭಟನೆ, ಹಿಂಸಾಚಾರ ರವಿವಾರ ಮತ್ತಷ್ಟು ವಿಷಮ ಸ್ಥಿತಿಗೆ ತಿರುಗಿದೆ. ಹೋರಾಟ ಹತ್ತಿಕ್ಕಲು ಚೀನ ಸರಕಾರ, ತನ್ನ ಸೇನೆಯನ್ನು (ಪಿಎಲ್‌ಎ) ಹಾಂಕಾಂಗ್‌ ನಗರಕ್ಕೆ ರವಾನಿಸಿರುವ ಹಿನ್ನೆಲೆಯಲ್ಲಿ, ಮತ್ತಷ್ಟು ರೊಚ್ಚಿಗೆದ್ದಿರುವ ಜನತೆ ಮಾರಕಾಸ್ತ್ರ ಹಿಡಿದು ಬೀದಿಗಿಳಿದು, ಸೇನೆ ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ಆರಂಭಿಸಿದ್ದಾರೆ. ರವಿವಾರ, ಪ್ರತಿಭಟನಕಾರರ ಬಿಲ್ಲು ಬಾಣದ ದಾಳಿಗೆ ಒಬ್ಬ ಪೊಲೀಸ್‌ ಸಿಬಂದಿ ಗಾಯಗೊಂಡಿದ್ದಾರೆ. ಉದ್ರಿಕ್ತನೊಬ್ಬ ಬಿಟ್ಟ ಬಾಣವು, ಪೊಲೀಸ್‌ ಸಿಬಂದಿಯ ಕಾಲನ್ನು ತೂರಿಕೊಂಡು ಹಿಂಬದಿಯಿಂದ ಹೊರ ಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶ್ವವಿದ್ಯಾಲಯ ವಶಕ್ಕೆ ಪಡೆದ ಉದ್ರಿಕ್ತರು: ನಗರದ ಕೊವ್ಲೂನ್‌ ಪ್ರಾಂತ್ಯದಲ್ಲಿ, ಹಾಂಕಾಂಗ್‌ ಪಾಲಿಟೆಕ್ನಿಕ್‌ ವಿಶ್ವವಿದ್ಯಾಲಯದ ಬಳಿ ಪ್ರತಿಭಟನಾಕಾರರು ತೀವ್ರ ಹಿಂಸಾಚಾರ ನಡೆಸಿದ್ದಾರೆ. ವಿವಿಯ ಕ್ಯಾಂಪಸ್‌ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದ ಪ್ರತಿಭಟನಾಕಾರರು, ಕ್ರಾಸ್‌-ಹಾರ್ಬರ್‌ ಸುರಂಗ ಮಾರ್ಗದ ಸಂಚಾರ ತಡೆಹಿಡಿದಿದ್ದರು. ಹೀಗಾಗಿ, ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ, ಪ್ರತಿಭಟನಾ ಕಾರರನ್ನು ಚದುರಿಸಿದರು. ಇದಲ್ಲದೇ, ಹಾಂಕಾಂಗ್‌ನ ಹಲವು
ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪ್ರತಿಭಟನಾಕಾರರು ವಶಪಡಿಸಿಕೊಂಡಿದ್ದಾರೆ.

ಪೊಲೀಸರಿಗೆ ಸೆಡ್ಡು: ಪ್ರತಿಭಟನಾಕಾರರು ತಮ್ಮನ್ನು ಪ್ರತಿಬಂಧಿಸಲು ಬರುವ ಪೊಲೀಸ್‌ ವಾಹನಗಳ ಮೇಲೆ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ.

ಹಿರಿಯರಿಗೆ ಸವಾಲು: ಯುವಜನರ ಪ್ರತಿಭಟನೆ ಮೇರೆ ಮೀರುತ್ತಿದ್ದರೆ, ಮಧ್ಯ ವಯಸ್ಸಿನ ನಾಗರಿಕರು, ರಸ್ತೆಗೆ ಇಳಿದು ಪ್ರತಿಭಟನಾಕಾರರು ರಸ್ತೆ ತಡೆಗೆ ಬಳಸುವ ಬ್ಯಾರಿಕೇಡ್‌ಗಳು, ಟೈರುಗಳನ್ನು ರಸ್ತೆಯ ಪಕ್ಕಕ್ಕೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲೆತ್ನಿಸುತ್ತಿದ್ದಾರೆ. ಆದರೆ, ನಾಗರಿಕರು ಹಾಗೆ ಸ್ವಚ್ಛ ಮಾಡಿ ತೆರಳಿದ ಬೆನ್ನಲ್ಲೇ ಕೆಲವು ಕಪ್ಪು ಟಿ-ಶರ್ಟ್‌ ಧರಿಸಿದ ಯುವಜನರು, ರಸ್ತೆ ಮೇಲೆ ಮತ್ತೆ ಟೈರು, ಬ್ಯಾರಿಕೇಡ್‌ಗಳನ್ನು ತಂದು ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ