ರೈತರಿಗೆ ನೀಡುವ ಮೊತ್ತ ಹೆಚ್ಚಳ?

Team Udayavani, Feb 4, 2019, 12:35 AM IST

ನ್ಯೂಯಾರ್ಕ್‌/ಹೊಸದಿಲ್ಲಿ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ “ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆಯನ್ವಯ ರೈತರಿಗೆ ಸಿಗಲಿರುವ ಮಾಸಿಕ 500 ರೂ.ಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಸುಳಿವು ನೀಡಿದ್ದಾರೆ.

ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಜೇಟ್ಲಿ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಸರಕಾರವು ಅನ್ನದಾತರಿಗೆ ತಿಂಗಳಿಗೆ 500 ರೂ.ಗಳಂತೆ ವರ್ಷಕ್ಕೆ 6 ಸಾವಿರ ರೂ. ನೀಡುವುದಾಗಿ ಸದ್ಯಕ್ಕೆ ಘೋಷಿಸಿದೆ. ಸರಕಾರದ ಸಂಪನ್ಮೂಲಗಳು ವೃದ್ಧಿಯಾದಂತೆ ಈ ಮೊತ್ತವನ್ನೂ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಲ್ಲದೆ, ರಾಜ್ಯ ಸರಕಾರಗಳು ಕೂಡ ತಮ್ಮದೇ ಆದ ರೈತ ಬೆಂಬಲ ಯೋಜನೆಗಳನ್ನು ಆರಂಭಿಸುವ ಮೂಲಕ ಈ ಮೊತ್ತವನ್ನು ಹೆಚ್ಚಳ ಮಾಡಲು ಅವಕಾಶವಿದೆ ಎಂದೂ ಜೇಟ್ಲಿ ಸಲಹೆ ನೀಡಿದ್ದಾರೆ.

ರೈತರಿಗೆ ನಗದು ವರ್ಗಾವಣೆ, ಮನೆ, ಆಹಾರ ಸಬ್ಸಿಡಿ, ಉಚಿತ ಆರೋಗ್ಯಸೇವೆ ಮತ್ತು ಚಿಕಿತ್ಸೆ, ವಿದ್ಯುತ್‌, ರಸ್ತೆ, ಅನಿಲ ಸಂಪರ್ಕ, ಕಡಿಮೆ ಬಡ್ಡಿಯಲ್ಲಿ ಸಾಲ ಮತ್ತಿತರ ಬಹುತೇಕ ಯೋಜನೆಗಳು ಕೃಷಿಕರ ಸಂಕಷ್ಟಗಳನ್ನು ದೂರ ಮಾಡುವಂಥದ್ದು. 12 ಕೋಟಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ.ಗಳನ್ನು ನೀಡುವ ಯೋಜನೆ ಈ ವರ್ಷವೇ ಆರಂಭವಾಗುತ್ತದೆ. ಸರಕಾರದ ಸಂಪನ್ಮೂಲಗಳು ಸುಧಾರಣೆಯಾದಂತೆ, ಈ ಮೊತ್ತದಲ್ಲೂ ಏರಿಕೆ ಮಾಡಲಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಜೇಟ್ಲಿ ಹೇಳಿದ್ದಾರೆ. 

ಇದೇ ವೇಳೆ, ಬಜೆಟ್‌ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, “ನನ್ನ ಪ್ರಕಾರ, ಅವರಿನ್ನೂ ಬೆಳೆಯಬೇಕಿದೆ. ಅಲ್ಲದೆ, ನಾನು ರಾಷ್ಟ್ರೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಯೇ ವಿನಾ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಲ್ಲ ಎಂಬುದನ್ನು ರಾಹುಲ್‌ ಅರ್ಥಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ