ವಿವಾಹೇತರ ಸಂಬಂಧ, ವ್ಯಭಿಚಾರ ಇನ್ನು ಶಿಕ್ಷಾರ್ಹ ಅಪರಾಧ
ಇಂಡೋನೇಷ್ಯಾದಲ್ಲಿ ಕಠಿಣ ಕಾನೂನಿಗೆ ಅಂಗೀಕಾರ
Team Udayavani, Dec 7, 2022, 7:45 AM IST
ಜಕಾರ್ತಾ: ಇನ್ನು ಮುಂದೆ ಇಂಡೋನೇಷ್ಯಾದಲ್ಲಿ ವ್ಯಭಿಚಾರ, ವಿವಾಹೇತರ ಲೈಂಗಿಕ ಸಂಬಂಧಗಳಿಗೆ ನಿಷೇಧ! ಕಾನೂನು ಉಲ್ಲಂಘಿಸಿದವರಿಗೆ 1 ವರ್ಷದ ಜೈಲು ಶಿಕ್ಷೆ ಖಚಿತ. ಅಷ್ಟೇ ಅಲ್ಲ, ಸರ್ಕಾರ ಅಥವಾ ಅಧ್ಯಕ್ಷರ ವಿರುದ್ಧ ಮಾತನಾಡುವುದು ಕೂಡ ಶಿಕ್ಷಾರ್ಹ ಅಪರಾಧ!
ಇಂಥದ್ದೊಂದು ಹೊಸ ಕ್ರಿಮಿನಲ್ ಸಂಹಿತೆಗೆ ಇಂಡೋನೇಷ್ಯಾ ಸಂಸತ್ ಅಂಗೀಕಾರ ನೀಡಿದೆ. ವಿಶೇಷವೆಂದರೆ ಈ ಎಲ್ಲ ನಿಯಮಗಳೂ ದೇಶದ ನಾಗರಿಕರಿಗೆ ಮಾತ್ರವಲ್ಲ, ಇಂಡೋನೇಷ್ಯಾಗೆ ಭೇಟಿ ನೀಡುವ ವಿದೇಶಿಯರಿಗೂ ಅನ್ವಯವಾಗುತ್ತದೆ.
2019ರಲ್ಲಿ ಇದರ ಕರಡು ಸಂಹಿತೆ ಅಂಗೀಕಾರಗೊಂಡಾಗ ರಾಷ್ಟ್ರವ್ಯಾಪಿ ಭಾರೀ ಪ್ರತಿಭಟನೆ ನಡೆದಿತ್ತು. ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವು.
ಎಲ್ಲೆಲ್ಲಿದೆ ಇಂಥ ಕಾನೂನು?
ಅಮೆರಿಕದ 21 ಪ್ರಾಂತ್ಯಗಳಲ್ಲಿ ತಾಂತ್ರಿಕವಾಗಿ ಈಗಲೂ ವ್ಯಭಿಚಾರವನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತಿದೆ. ಇನ್ನು, ಇರಾನ್, ಸೌದಿ ಅರೇಬಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಸೊಮಾಲಿಯಾದಂಥ ಇಸ್ಲಾಮಿಕ್ ದೇಶಗಳಲ್ಲಿ ಶರಿಯಾ ಕಾನೂನು ಜಾರಿಯಲ್ಲಿದೆ. ಅದರಂತೆ, ವ್ಯಭಿಚಾರ, ಸಲಿಂಗಕಾಮ, ವಿವಾಹೇತರ ಸಂಬಂಧ ಶಿಕ್ಷಾರ್ಹ ಅಪರಾಧವಾಗಿದೆ.
ಹೊಸ ಕಾನೂನಿನಲ್ಲಿ ಏನಿದೆ?
– ವಿವಾಹೇತರ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಒಂದು ವರ್ಷ ಜೈಲು ಶಿಕ್ಷೆ
– ಲಿವ್-ಇನ್-ರಿಲೇಷನ್‌ಶಿಪ್ (ಸಹ ಜೀವನ) ಕಾನೂನುಬಾಹಿರ.
– ವ್ಯಭಿಚಾರ ಮಾಡುವುದು ಕ್ರಿಮಿನಲ್ ಅಪರಾಧ. ತಪ್ಪಿತಸ್ಥರಿಗೆ 1 ವರ್ಷ ಜೈಲು
– ಧರ್ಮಭ್ರಷ್ಟತೆ ಅಪರಾಧ. ಧರ್ಮ ತ್ಯಜಿಸುವಂತೆ ಯಾರೂ ಯಾರ ಮೇಲೂ ಒತ್ತಡ ಹೇರುವಂತಿಲ್ಲ
– ಸರ್ಕಾರ ಮತ್ತು ಅಧ್ಯಕ್ಷರ ವಿರುದ್ಧ ಮಾತನಾಡಿವುದು ಕೂಡ ಕಾನೂನುಬಾಹಿರ